Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಮಾದರಿ ರೇಷ್ಮೆ ಬಿತ್ತನೆ ಕೋಠಿಗೆ ಮಂಗಳವಾರ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಹಾಗೂ ರೇಷ್ಮೆ ನಿರ್ದೇಶಕ ಎಂ.ಬಿ.ರಾಜೇಶ್ ಗೌಡ ಮತ್ತು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆ.ಎಸ್.ಐ.ಸಿ) ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಾಸಿಮ್ ಭೇಟಿ ನೀಡಿದ್ದರು.
ಮಲ್ಟಿ ಎಂಡ್ ಮತ್ತು ಎ.ಆರ್.ಎಂ ಯಂತ್ರಗಳ ಮೂಲಕ ಬೈವೋಲ್ಟೀನ್ ಮತ್ತು ಸಿ.ಬಿ ರೇಷ್ಮೆ ಗೂಡುಗಳಿಂದ ಉತ್ಪಾದಿಸುತ್ತಿರುವ ರೇಷ್ಮೆ ನೂಲನ್ನು ಖರೀದಿಸುವ ನಿಟ್ಟಿನಲ್ಲಿ ಹಾಗೂ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಚರ್ಚಿಸಲು ಅವರು ಆಗಮಿಸಿದ್ದರು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಹಾಗೂ ರೇಷ್ಮೆ ನಿರ್ದೇಶಕ ಎಂ.ಬಿ.ರಾಜೇಶ್ ಗೌಡ ಮಾತನಾಡಿ, ಗುಣಮಟ್ಟದ ರೇಷ್ಮೆ ನೂಲನ್ನು ಕೆ.ಎಸ್.ಐ.ಸಿ ಖರೀದಿಸುತ್ತದೆ. ಅದಕ್ಕೆ ದೃಢತೆ, ಹಿಗ್ಗುವಿಕೆ ಮುಂತಾದ ಸುಮಾರು ಹದಿಮೂರು ನಿಯತಾಂಕಗಳಿವೆ. ಆ ಗುಣಮಟ್ಟದ ಅಂಶಗಳನ್ನು ಪರಿಗಣಿಸಿ ರೇಷ್ಮೆ ನೂಲನ್ನು ಉತ್ತಮ ದರ ನಿಗದಿಪಡಿಸಿ ಖರೀದಿಸಲಾಗುವುದು ಎಂದು ಹೇಳಿ, ಈ ಬಗ್ಗೆ ಮಲ್ಟಿ ಎಂಡ್ ಮತ್ತು ಎ.ಆರ್.ಎಂ ರೀಲರುಗಳು, ಪ್ರಗತಿಪರ ರೈತರು ಅಧಿಕಾರಿಗಳೊಡನೆ ಚರ್ಚಿಸಿದರು.
ರೀಲರುಗಳಾದ ಅನ್ವರ್, ಇರ್ಷಾದ್, ಅಹಮದ್ ಮಾತನಾಡಿ, “ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಮಾರುಕಟ್ಟೆಯ ಸಮಸ್ಯೆಯಿದೆ. ಹಿಂದೆ ಕೆ.ಎಸ್.ಎಂ.ಬಿ ಮೂಲಕ ರೇಷ್ಮೆ ಖರೀದಿಸುತ್ತಿದ್ದರು. ರೈತರು ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದು ಮಾರಿ ತಕ್ಷಣವೇ ಹಣ ಪಡೆದು ವಾಪಸಾಗುತ್ತಾರೆ. ಆದರೆ ರೀಲರುಗಳು ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದೇವೆ.
ನಾವು ಉತ್ಪಾದಿಸುವ ಕಚ್ಚಾ ರೇಷ್ಮೆಯನ್ನು ನೇರವಾಗಿ ಮಗ್ಗದವರಿಗೆ ಮಾರಿ ಹಣ ಪಡೆಯಲು ಅನುಕೂಲವಾಗುವ ಹಾಗೆ ಒಂದು ಕಚ್ಚಾ ರೇಷ್ಮೆಯ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ರೇಷ್ಮೆ ಗೂಡಿಗೆ ಮಾರುಕಟ್ಟೆ ಇದ್ದ ಹಾಗೆ, ರೇಷ್ಮೆ ನೂಲಿಗೂ ಮಾರುಕಟ್ಟೆ ಬೇಕು. ಆಗ ಮಾತ್ರ ರೀಲರುಗಳು ಅಭಿವೃದ್ಧಿಯಾಗಲು ಸಾಧ್ಯ. ಇಲ್ಲದಿದ್ದರೆ ಈ ಉದ್ದಿಮೆ ಕ್ಷೀಣಿಸುತ್ತದೆ” ಎಂದು ಹೇಳಿದರು.
“ಎಲ್ಲಾ ರೀಲರುಗಳೂ ಸ್ಥಿತಿವಂತರಲ್ಲ. ಮಲ್ಟಿ ಎಂಡ್ ಮತ್ತು ಎ.ಆರ್.ಎಂ ಸ್ಥಾಪಿಸಲು ಲಕ್ಷಾಂತರ ಹಣದ ಅಗತ್ಯವಿದೆ. ಶಿಡ್ಲಘಟ್ಟದಲ್ಲಿ ಸಧ್ಯದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಇಟಾಲಿಯನ್ ಮಾಡೆಲ್ ಕಾಟೇಜ್ ಬೇಸಿನ್ ರೇಷ್ಮೆ ನೂಲು ಬಿಚ್ಚಾಣಿಕೆಯ ಯಂತ್ರೋಪಕರಣದಲ್ಲಿ ತಾಂತ್ರಿಕತೆಯನ್ನು ಹೆಚ್ಚಿಸಿಕೊಡಿ, ಉನ್ನತೀಕರಿಸಿಕೊಡಿ” ಎಂದು ಮನವಿ ಮಾಡಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, “ರೇಷ್ಮೆ ಗೂಡನ್ನು ಬೆಳೆಯುವ ರೈತರು ಉತ್ಸಾಹ ಮತ್ತು ಪ್ರೋತ್ಸಾಹ ಕಳೆದುಕೊಂಡಿದ್ದಾರೆ. ರೇಷ್ಮೆ ಗೂಡಿನ ಮಾರುಕಟ್ಟೆಗೆ ಆವಕ ಕುಂಠಿತಗೊಂಡಿದೆ. ಈ ಬಗ್ಗೆ ಮುಂದಾಲೋಚನಾ ಯೋಜನೆ ರೂಪಿಸುವ ಅಗತ್ಯವಿದೆ. ಶಿಡ್ಲಘಟ್ಟದ ಹನುಮಂತಪುರದ ಬಳಿ ಅಂತರರಾಷ್ಟ್ರೀಯ ಮಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಆದಷ್ಟು ಬೇಗ ಹಣ ಬಿಡುಗಡೆ ಮಾಡಿ. ಮೊದಲು ಆ ಜಾಗಕ್ಕೆ ಕಾಂಪೌಂಡ್ ಹಾಕಿಸಿ.
ಈ ಹಿಂದೆ ರೇಷ್ಮೆ ಮಾರುಕಟ್ಟೆಗಾಗಿ ಪಿಂಡಿಪಾಪನಹಳ್ಳಿ ಬಳಿ ಸ್ಥಳ ಗುರುತಿಸಿದ್ದನ್ನು ಸಿಲ್ಕ್ ಟೆಕ್ಸ್ ಟೈಲ್ ಪಾರ್ಕ್ ಮಾಡಲು ಯೋಜನೆ ರೂಪಿಸಿ. ಆಗ ರೇಷ್ಮೆ ನೂಲಿಗೆ ಬೆಲೆ ಮತ್ತು ಮಾರುಕಟ್ಟೆ ಲಭಿಸುತ್ತದೆ. ರೇಷ್ಮೆ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಕೊಡಿ. ಸೊಪ್ಪು ಕಟಾವು ಯಂತ್ರದ ಅಗತ್ಯ ರೈತರಿಗೆ ಬಹಳವಾಗಿ ಇದೆ. ಹಿಪ್ಪುನೇರಳೆ ಸೊಪ್ಪಿಗೆ ಬಂದ ರೋಗದ ಬಗ್ಗೆ ವಿಜ್ಞಾನಿಗಳು ಶೀಘ್ರವಾಗಿ ಪರಿಹಾರ ಕಂಡುಕೊಡಬೇಕಿದೆ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ವೇತನ 11 ತಿಂಗಳಿನಿಂದ ಕೊಟ್ಟಿಲ್ಲ. ಭೂಮಿ ಫಲವತ್ತತೆ ಹೆಚ್ಚಿಸಲು ಉತ್ತೇಜನ ಅಂಶಗಳನ್ನು ರೈತರಿಗೆ ಒದಗಿಸಿ” ಎಂದು ಹೇಳಿದರು.
ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿ, “ಸೊಪ್ಪು ಕಟಾವು ಯಂತ್ರಗಳನ್ನು ಶೇ 90 ರಷ್ಟು ಸಬ್ಸಿಡಿ ದರದಲ್ಲಿ ಒದಗಿಸಬೇಕು. ಹಳೆಯದಾದ ಹನಿನೀರಾವರಿ ಐದು ವರ್ಷಕ್ಕೊಮ್ಮೆ ಪುನಃ ನೀಡಬೇಕು. ರೇಷ್ಮೆ ಗೂಡು ಬೆಲೆ ಕುಸಿತ ಕಂಡಾಗ ಬೆಂಬಲ ಬೆಲೆ ನೀಡಬೇಕು. ಕಾಲಕ್ಕೆ ತಕ್ಕಂತೆ ಸುಣ್ಣ, ಮುಂತಾದ ರೋಗನಿರೋಧಕ ಔಷಧಿಗಳನ್ನು ಉಚಿತವಾಗಿ ನೀಡಬೇಕು” ಎಂದು ಕೋರಿದರು.
ಕೆ.ಎಸ್.ಎಂ.ಬಿ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್, ರೇಷ್ಮೆ ಹೆಚ್ಚುವರಿ ನಿರ್ದೇಶಕ(ತಾಂತ್ರಿಕ) ವೈ.ಟಿ.ತಿಮ್ಮಯ್ಯ, ರೇಷ್ಮೆ ಜಂಟಿ ನಿರ್ದೇಶಕರಾದ ಅನಂತ್ ಎಸ್.ಪ್ರಭು, ಪುಷ್ಪಲತಾ, ರೇಷ್ಮೆ ಉಪನಿರ್ದೇಶಕರಾದ ಸೀಮಾ, ವಾಸುದೇವಯ್ಯ, ಬೋಜಣ್ಣ, ಸಹಾಯಕ ನಿರ್ದೇಶಕ ಶ್ರೀನಿವಾಸ ಗೌಡ, ರೇಷ್ಮೆ ಬೆಳೆಗಾರರಾದ ಮಳ್ಳೂರು ಹರೀಶ್, ಎಚ್.ಕೆ.ಸುರೇಶ್, ದೇವರಾಜ್, ಬೈರೇಗೌಡ ಹಾಜರಿದ್ದರು.