ಮಕ್ಕಳ ಕಲರವವಿಲ್ಲದೆ, ಶಿಕ್ಷಕರ ಗಂಭೀರ ಸ್ವರವಿಲ್ಲದೆ ಸ್ತಬ್ಧವಾಗಿದ್ದ ಶಾಲೆಗಳಲ್ಲಿ ಕಲಿಕೆ– ಬೋಧನಾ ಚಟುವಟಿಗೆ ಮತ್ತೆ ಗರಿಗೆದರಿದೆ. ಬಿಕೋ ಎನ್ನುತ್ತಿದ್ದ ವಾತಾವರಣದಲ್ಲಿ ಮೊದಲಿನ ಕಳೆ ಮರಳಿದೆ.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ 1ರಿಂದ 5ರವರೆಗೆ ಭೌತಿಕ ತರಗತಿಗಳು ಸೋಮವಾರ ಆರಂಭವಾದವು. ಕೋವಿಡ್ ಸಾಂಕ್ರಾಮಿಕ ಕಾರಣ ಒಂದು ವರ್ಷ ಎಂಟು ತಿಂಗಳಿನಿಂದ ಮುಚ್ಚಿದ್ದ ತರಗತಿಯ ಕೊಠಡಿಗಳು ಮತ್ತೆ ತೆರೆದುಕೊಂಡಿವೆ.
“ತಾಲ್ಲೂಕಿನಲ್ಲಿ 250 ಸರ್ಕಾರಿ ಶಾಲೆಗಳು, 11 ಅನುದಾನಿತ ಶಾಲೆಗಳು ಮತ್ತು 25 ಅನುದಾನರಹಿತ ಶಾಲೆಗಳಲ್ಲಿನ ಒಟ್ಟಾರೆ 14,032 ಮಕ್ಕಳಿಗೆ ಇಂದು ಬಹಳ ದಿನಗಳ ನಂತರ ಶಾಲೆಗೆ ಪ್ರವೇಶ ಸಿಕ್ಕಿದೆ. ತಾಲ್ಲೂಕಿನ 20 ಕ್ಲಸ್ಟರ್ ಗಳಲ್ಲಿನ ಶಾಲೆಗಳನ್ನು ವಿಂಗಡಿಸಿದ್ದು, ಎಲ್ಲೆಡೆ ಬಿ.ಆರ್.ಸಿ ಗಳು ಹಾಗೂ ಸಿ.ಆರ್.ಸಿ ಗಳು ಭೇಟಿ ನೀಡಿದ್ದಾರೆ. ನಾನು ಕೂಡ ಹಲವು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಮಾತನಾಡಿದೆ. ಸಕಾರಾತ್ಮಕ ಅಭಿಪ್ರಾಯ ಮೂಡಿದೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದರು.
ಎಲ್ಲ ಶಾಲೆಗಳಲ್ಲಿ ಶನಿವಾರ ಮತ್ತು ಭಾನುವಾರವೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಅಂತರ ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಮಾಡಲಾಗಿತ್ತು. ಶಾಲೆಗಳ ದ್ವಾರಗಳನ್ನು ತಳಿರು ತೋರಣ, ಬಲೂನಿನಿಂದ ಸಿಂಗರಿಸಿ ಅಲಂಕರಿಸಲಾಗಿತ್ತು.
ಸೋಮವಾರ ಬೆಳಿಗ್ಗೆ ಶಾಲೆಯ ಪ್ರವೇಶದ್ವಾರದಲ್ಲಿ ಮಕ್ಕಳ ದೇಹದ ಉಷ್ಣತೆ ಪರೀಕ್ಷಿಸಿ ಬಳಿಕ ಒಳಗೆ ಬಿಡಲಾಯಿತು. ಕೆಲವು ಕಡೆ ಮಕ್ಕಳ ಮೇಲೆ ಶಿಕ್ಷಕರು ಪುಷ್ಪಾರ್ಚನೆ ಮಾಡಿದರೆ, ಬಾಂಡ್, ವಾದನದ ಮೂಲಕವೂ ಬರಮಾಡಿಕೊಂಡರು. ಮಕ್ಕಳಿಗೆ ಶಿಕ್ಷಕರು ಪೇಪರ್ ಟೊಪ್ಪಿ, ಗುಲಾಬಿ ಹೂವು, ಮಾಸ್ಕ್, ಸಿಹಿ ನೀಡಿಯೂ ಸ್ವಾಗತಿಸಿದರು.
ಈ ನಡುವೆ, “ಮಕ್ಕಳಿಗೂ ಲಸಿಕೆ ಹಾಕಿಸಿದ ನಂತರವೇ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು” ಎಂದು ಕೆಲವು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಮನೆಯಲ್ಲಿ ನಾವು ಎಷ್ಟು ಹೇಳಿದರೂ ಮಕ್ಕಳು ಕೇಳುವುದಿಲ್ಲ. ಮಗ್ಗಿ ಕೂಡ ಮರೆತಿದ್ದಾರೆ. ಶಾಲೆ ಆರಂಭವಾಗಿದ್ದು ಒಳ್ಳೆಯದಾದಾಯಿತು” ಎಂದು ಶಾಲೆ ಆರಂಭಿಸಿದ ಸರ್ಕಾರದ ತೀರ್ಮಾನವನ್ನು ಇನ್ನೂ ಕೆಲವು ಪೋಷಕರು ಸಮರ್ಥಿಸಿದ್ದಾರೆ.
“ಶಾಲೆ ಶುರುವಾಗಿದ್ದರಿಂದ ಖುಷಿಯಾಗಿದೆ. ನಮ್ಮ ಶಿಕ್ಷಕರು, ಗೆಳೆಯರನ್ನು ಕಾಣಲು ಸಾಧ್ಯವಾಗಿದೆ. ಆನ್ ಲೈನ್ ಪಾಠ ಕೇಳಿ ಸಾಕಾಗಿತ್ತು. ಈಗ ಖುದ್ದು ಅವರಿಂದಲೇ ಪಾಠ ಕೇಳಬಹುದು. ಗೆಳೆಯರೊಂದಿಗೆ ಹರಟೆ ಹೊಡೆಯಬಹುದು. ಆಟ ಆಡಬಹುದು” ಎಂದು ವಿದ್ಯಾರ್ಥಿಗಳು ಖುಷಿ ಹಂಚಿಕೊಂಡಿದ್ದಾರೆ. “ಮಕ್ಕಳ ಬರುವಿಕೆಯಿಂದ ಶಾಲೆಗೆ ವಿಶೇಷ ಕಳೆ ಬಂದಿದೆ” ಎಂದು ಕೆಲವು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಕುಂಭಿಗಾನಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಿಕ್ಷಕರಾದ ಅಶೋಕ್ ಮತ್ತು ಸಂಪತ್ ಕುಮಾರ್ ಅವರೊಂದಿಗೆ ಮಕ್ಕಳ ಮನೆಗಳಿಗೆ ತೆರಳಿ ನೋಟ್ ಪುಸ್ತಕಗಳನ್ನು ನೀಡಿ ಶಾಲೆಗೆ ಕರೆತಂದರು.