
Sidlaghatta : ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿ ಶಿಡ್ಲಘಟ್ಟದಲ್ಲಿ ಕ್ಷೌರಿಕ ವೃತ್ತಿ ನಡೆಸುವವರಿಗೆ ಅಂಗಡಿ ತೆರೆಯಲು ಪರವಾನಗಿ ನೀಡಬಾರದು ಎಂದು ಸವಿತಾ ಸಮಾಜದ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ಕಾರ್ಮಿಕ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಕಾರ್ಮಿಕ ನಿರೀಕ್ಷಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಸಮಾಜದ ಸದಸ್ಯರು, ಕ್ಷೌರಿಕ ವೃತ್ತಿಯು ಧರ್ಮಾಧಾರಿತ ಕುಲಕಸುಬಾಗಿದ್ದು, ಈ ವೃತ್ತಿಯಲ್ಲಿ ಆಧುನಿಕ ಬಂಡವಾಳಶಾಹಿಗಳು ಹಾಗೂ ಅನ್ಯ ಧರ್ಮೀಯರು ಪ್ರವೇಶಿಸುತ್ತಿರುವುದರಿಂದ ಮೂಲ ವೃತ್ತಿಪರರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮನುಷ್ಯ ಹುಟ್ಟಿದಾಗಿನಿಂದ ಅಂತ್ಯ ಸಂಸ್ಕಾರದವರೆಗೂ ಕ್ಷೌರಿಕರ ಸೇವೆ ಅಗತ್ಯವಾಗಿದ್ದು, ಪ್ರಸಾಧನ ಕಲೆಯೂ ಕೂಡ ಈ ವೃತ್ತಿಯೊಂದಿಗೆ ಬೆಸೆದುಕೊಂಡಿದೆ. ಈ ಕಸುಬನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದುಕನ್ನು ಸಾಗಿಸುತ್ತಿವೆ. ಆದರೆ ಇತ್ತೀಚೆಗೆ ಅನ್ಯ ರಾಜ್ಯದ ಜನರು ಮತ್ತು ಬಂಡವಾಳ ಶಾಹಿಗಳು ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸ್ಥಳೀಯ ಕುಲಕಸುಬುದಾರರಲ್ಲಿ ಆತಂಕ ಸೃಷ್ಟಿಸಿದೆ ಎಂದು ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ನಗರಸಭೆ ಪೌರಾಯುಕ್ತರು ಹಾಗೂ ಶಿಡ್ಲಘಟ್ಟ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ರಿಗೆ ಸಹ ಮನವಿ ಸಲ್ಲಿಸಲಾಗಿತ್ತು. ಮನವಿ ಸಲ್ಲಿಸುವ ಸಂದರ್ಭ ಸಮಿತಿಯ ಲೊಕೇಶ್, ಪವನ್ ಕುಮಾರ್, ಅನಿಲ್, ನಾಯಕ್, ಅರವಿಂದ್, ರಾಜಪ್ಪ, ಆನಂದ್, ನವೀನ್ ಮತ್ತಿತರರು ಹಾಗೂ ಸವಿತಾ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು.