
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಎಜುಕೇಷನಲ್ ಟ್ರಸ್ಟ್ ಮತ್ತು ಶ್ರೀ ಅಂಭ ಕನಕದುರ್ಗ ದೇವಿ ದೇವಾಲಯ ಸೇವಾ ಸಮಿತಿಯ ಸಹಯೋಗದಲ್ಲಿ “ನಂದಿ ಉತ್ಸವ 2025” ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ.ವಿ. ಓಬಳಪ್ಪ ಉದ್ಘಾಟಿಸಿ ಮಾತನಾಡಿದರು. “ಗ್ರಾಮೀಣ ಭಾಗಗಳಲ್ಲಿನ ಕಲೆ ಮತ್ತು ಪ್ರವಾಸೋದ್ಯಮದ ಮೂಲಗಳನ್ನು ಬೆಳಗಿಸುವ ಮೂಲಕ ನಮ್ಮ ಸಂಸ್ಕೃತಿಯ ಪಸರವನ್ನು ವಿಸ್ತಾರಗೊಳಿಸಬೇಕಿದೆ. ಬಾಹ್ಯ ಜಗತ್ತಿಗೆ ನಮ್ಮ ಗ್ರಾಮ್ಯ ಸಂಸ್ಕೃತಿಯ ವೈಭವವನ್ನು ಪರಿಚಯಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಉತ್ಸವಗಳು ಶ್ಲಾಘನೀಯ. ಗ್ರಾಮೀಣ ಹಿನ್ನಲೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಎಲ್ಲರೂ ಒಟ್ಟಾಗಿ ಈ ಸಂಸ್ಕೃತಿಯ ರಕ್ಷಣೆಗಾಗಿ ಸಹಕಾರ ನೀಡಬೇಕು,” ಎಂದು ಹೇಳಿದರು.
ಈ ಸಂದರ್ಭ ಶ್ರೀ ನಂದಿಶ್ವರ ಬೃಂಗೀಶ್ವರ ಸೋಮೇಶ್ವರ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಪ್ರಾಕಾರೋತ್ಸವ ನೆರವೇರಿಸಲಾಯಿತು. ಯರ್ರಾನಾಗೇನಹಳ್ಳಿಯ ಕೃಷ್ಣಪ್ಪ ಮತ್ತು ತಂಡದಿಂದ ನಾದಸ್ವರ ವಾದನ ಕಾರ್ಯಕ್ರಮ ನಡೆದಿದ್ದು, ಭಕ್ತರಿಗೆ ಭಾವನಾತ್ಮಕ ಅನುಭವವನ್ನು ನೀಡಿತು. ನಂತರ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಸಾಂಸ್ಕೃತಿಕ ಭಾಗವಾಗಿ ಯಶವಂತ್ ಸ್ಕೂಲ್ ಆಫ್ ಡ್ಯಾನ್ಸ್‌ನ ನಿರ್ದೇಶಕ ಮಂಚನಬಲೆ ಎಂ. ಶ್ರೀನಿವಾಸ್ ನೇತೃತ್ವದ ತಂಡದಿಂದ ನೃತ್ಯ ಪ್ರದರ್ಶನ, ರಾಜ್ ಡ್ಯಾನ್ಸ್ ನಿರ್ದೇಶಕ ರಾಜ್ ತಂಡದಿಂದ ನೃತ್ಯ ಕಾರ್ಯಕ್ರಮ, ಹಾಗೂ ಕಲಾವಿದೆ ಎನ್. ಭುವನೇಶ್ವರಿ ಭರತನಾಟ್ಯ ಪ್ರಸ್ತುತಿಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಈ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ವಿ. ಪ್ರಸಾದ್, ಸೋಮೇಶ್ವರದ ರವಿಕುಮಾರ್ ಶರ್ಮಾ, ಡಿ.ಎಸ್. ಪದ್ಮಪ್ರಭು, ವಿಜಯಕುಮಾರ, ಡಿ.ಎನ್. ರವಿಚಂದ್ರ, ರಾಮದಾಸ್, ಡಿ.ವಿ. ಶ್ರೀನಿವಾಸಮೂರ್ತಿ, ಶಿವಕುಮಾರ್, ಗೋವಿಂದ ರಾಜ್, ಲಕ್ಷ್ಮೀ ದೇವಮ್ಮ, ಗಾಯತ್ರಿ, ದೀಪಕ್, ಬಾಲ ಗಂಗಾಧರ್, ಅನಂತ ಕುಮಾರ, ಡಿ.ಎಲ್. ನಾಗೇಶ್, ಡಿ.ಆರ್. ಶ್ರೀನಿವಾಸಮೂರ್ತಿ, ಡಿ.ಜಿ. ರಾಘವೇಂದ್ರ ರಾವ್, ಡಿ.ಟಿ. ಶ್ರೀನಿವಾಸ ಮೂರ್ತಿ, ಶ್ರೀನಿವಾಸ್, ಗಣೇಶಪ್ಪ, ಗಂಗಾಧರ, ರಾಮಣ್ಣ, ವೈ.ಎ. ನರಸಿಂಹಪ್ಪ, ಶ್ರೀನಿವಾಸಪ್ಪ, ಕೊಂಡಪ್ಪ, ರಾಜೇಶ್, ಅಭಿಲಾಷ್, ಯಶವಂತ್, ಸಂಜಯ್, ಸೋಮು, ಶೇಖರ್ ಸೇರಿದಂತೆ ಅನೇಕರು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು.