Appegowdanahalli, sidlaghatta : ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು “ಗ್ರಾಮೀಣ ಕ್ರೀಡೋತ್ಸವ” ಯೋಜಿಸಲಾಗುತ್ತಿದೆ. ಕ್ರೀಡೆಗಳು ಸರ್ವಾಂಗೀಣ ಬೆಳವಣಿಗೆಗೆ ಬಹಳ ಸಹಕಾರಿ ಎಂದು ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹಂಡಿಗನಾಳ ಗ್ರಾಮಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪಾರಂಪರಿಕ ಮತ್ತು ದೇಶಿಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರೀಡೆಗಳಲ್ಲಿ ವಯೋಮಿತಿಯನ್ನು ಸಹ ನಿಗದಿಪಡಿಸಿಲ್ಲ. ಗ್ರಾಮೀಣ ಕ್ರೀಡಾಕೂಟಕ್ಕೆ ಸ್ಥಳೀಯವಾಗಿ ಜನಪ್ರಿಯವಾಗಿರುವ ಕ್ರೀಡೆಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಆರೋಗ್ಯ ರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಖೋ ಖೋ, ಕಬಡ್ಡಿ, ವಾಲಿಬಾಲ್, ಕುಸ್ತಿ ಮುಂತಾದ ಕ್ರೀಡೆಗಳನ್ನು ಆಡಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಪಿಡಿಒ ಕೆ.ಎಸ್.ಮಧು, ಕಾರ್ಯದರ್ಶಿ ಎಚ್.ಎನ್.ಶ್ರೀನಿವಾಸ್, ಸದಸ್ಯರಾದ ಮಂಜುಳಮ್ಮ, ದ್ಯಾವಪ್ಪ, ವೆಂಕಟರತ್ನ, ಸುದೀಪ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಾಮಸ್ಥರಾದ ಮುನೀಂದ್ರ, ರಾಮಾಂಜಿನಪ್ಪ, ಶಿಕ್ಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.