Sidlaghatta : ಶಿಡ್ಲಘಟ್ಟ ನಗರದ ಸ್ತ್ರೀ ಶಕ್ತಿ ಭವನದಲ್ಲಿ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತಿ ಮತ್ತು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಇಲಾಖೆ ಸಹಾಯಕದೊಂದಿಗೆ 2024-25 ನೇ ಸಾಲಿನ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಹಸೀಲ್ದಾರ್ ಬಿ.ಎನ್ ಸ್ವಾಮಿ ಗಿಡ ನೆಟ್ಟು, ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೇ, ವರ್ಷಪೂರ್ತಿ ವಿವಿಧ ರೀತಿಯಲ್ಲಿ ಗರ್ಭಿಣಿಯರು, ತಾಯಂದಿರಲ್ಲಿ ಪೌಷ್ಟಿಕ ಆಹಾರ ಸೇವನೆ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗೃತಿ ಮೂಡಿಸಬೇಕು. ನಿತ್ಯ ಮಗುವಿಗೆ ಆಹಾರ ನೀಡುವ ವಿಧಾನ, ತಾಯಿಯ ಎದೆಹಾಲಿನ ಪ್ರಾಮುಖ್ಯತೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಇತರೆ ಉಪ ಆಹಾರಗಳನ್ನು ನೀಡುವ ವಿಧಾನಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣೆಕಾರ ರಮೇಶ್, ಸಿ ಡಿ ಪಿ ಓ ವಿದ್ಯಾ ವಸ್ತ್ರದ್, ಶಿವಪ್ಪ, ಮೇಲ್ವಿಚಾರಕಿ ಶಶಿಕಲಾ, ಆರೋಗ್ಯ ಇಲಾಖೆ ದೇವರಾಜ್, ಹಾಗೂ ಇಲಾಖೆ ಸಿಬ್ಬಂದಿ ವರ್ಗ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.