ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ರೈತ ಸಂಘ ಹಸಿರುಸೇನೆ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಅವರು ಮಾತನಾಡಿದರು.
ಕಳೆದ ಮಂಗಳವಾರ ನಗರಸಭೆ ಮಾಜಿ ಅಧ್ಯಕ್ಷ ಬಿ.ಅಫ್ಸರ್‌ಪಾಷ ಹಾಗೂ ಸದಸ್ಯ ಸಿ.ಮೌಲಾ ಸೇರಿದಂತೆ ಹಲವು ಮುಖಂಡರು ಸುದ್ದಿಘೋಷ್ಠಿ ನಡೆಸಿ ರೈತರು ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ತಾಲ್ಲೂಕಿನ ಕಸಬಾ ಹೋಬಳಿ ಸರ್ವೆ ನಂ 29 ರಿಂದ 37 ಮತ್ತು 77 ರಿಂದ 85 ರವರೆಗೆ ಹಾಗೂ ಇದ್ಲೂಡು ಗ್ರಾಮಸರ್ವೆ ನಂ 26 ರಿಂದ 28 ಮತ್ತು 36 ರಿಂದ 38 ರವರೆಗೆ, 41 ರಿಂದ 45 ರವರೆಗೆ ಮತ್ತು ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂ 5 ರಲ್ಲಿ ಇರುವ ಜಮೀನುಗಳು ನಮ್ಮ ಪೂರ್ವಜರ ಕಾಲದಿಂದ ಬಂದಂತಹ ಜಮೀನುಗಳಾಗಿವೆ. ರೈತರಾದ ನಾವು ನಮ್ಮ ಹಿರಿಯರ ಕಾಲದಿಂದಲೂ ಬಂದಿರುವ ನಮ್ಮ ಸ್ವಂತ ಜಮೀನುಗಳನ್ನು ಭದ್ರ ಪಡಿಸಿಕೊಳ್ಳುವ ದೃಷ್ಠಿಯಿಂದ ನಮ್ಮ ನಮ್ಮ ಜಮೀನುಗಳಿಗೆ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದೇವೆಯೇ ಹೊರತು ಯಾವುದೇ ರಸ್ತೆ ಒತ್ತುವರಿಯನ್ನು ಮಾಡಿಕೊಂಡಿಲ್ಲ ಎಂದು ತಿಳಿಸಿದರು.
ಈ ಹಿಂದೆ ಮೇಲ್ಕಂಡ ಸರ್ವೇ ಸಂಖ್ಯೆಗಳ ಪಕ್ಕದಲ್ಲಿದ್ದ ಓಣಿಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಬಡವರು ಜೀವನ ನಡೆಸಲು ಅನುಕೂಲ ಮಾಡಲಾಗಿತ್ತು. ಮನೆಗಳಾದಂತೆ ರಸ್ತೆಗಳನ್ನು ಸಹ ಬಿಡದೇ ಮನೆ, ಶೌಚಾಲಯ ನಿರ್ಮಿಸಿಕೊಂಡಿರುವ ಅಲ್ಲಿನ ಜನರು ಇದೀಗ ಬಲವಂತವಾಗಿ ರೈತರಿಗೆ ಸೇರಿದ ಸರ್ವೇ ನಂ ನಲ್ಲಿರುವ ಜಮೀನುಗಳಲ್ಲಿ ರಸ್ತೆ ಬಿಡುವಂತೆ ಕಿರುಕುಳ ನೀಡುತ್ತಿದ್ದಾರೆ. ಸಾಲದೆಂಬಂತೆ ಇವರಿಗೆ ಕೆಲ ಜನ ಪ್ರತಿನಿಧಿಗಳು ಕುಮ್ಮಕ್ಕು ನೀಡಿ ವಿನಾಕಾರಣ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ನಗರದ ವಾರ್ಡ್ 12 ರಲ್ಲಿನ 3 ನೇ ಕಾರ್ಮಿಕನಗರ, ಗಾಂಧಿನಗರ ಮತ್ತು ರಹಮತ್ ನಗರ ತೀರಾ ಹಿಂದುಳಿದಿದ್ದು ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ ಎಂದು ಆರೋಪ ಮಾಡಿರುವ ನಗರಸಭೆ ಸದಸ್ಯ ಮೌಲಾ ಅವರು ಸೂಕ್ತ ರೀತಿಯಲ್ಲಿ ತಾಲ್ಲೂಕು ಆಡಳಿತ ಅಥವಾ ನಗರಸಭೆಯಿಂದ ಸೂಕ್ತ ಜಾಗ ಮಂಜೂರು ಮಾಡಿಸಿ ಶಾಲೆ ಹಾಗೂ ಅಂಗನವಾಡಿ ನಿರ್ಮಾಣ ಮಾಡಲು ಮುಂದಾಗಲಿ, ಅದು ಬಿಟ್ಟು ರೈತರಿಗೆ ಸೇರಿದ ಜಮೀನಿನಲ್ಲಿ ನಿರ್ಮಾಣ ಮಾಡಬೇಕೆನ್ನುವುದು ಸರಿಯಲ್ಲ ಎಂದರು.
ಬಯಲು ಸೀಮೆ ಭಾಗದಲ್ಲಿ 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತಹದರಲ್ಲಿ ವ್ಯರ್ಥವಾಗಿ ಹೋಗುತ್ತಿರುವ ಚರಂಡಿ ನೀರನ್ನು ಬಳಸಿಕೊಂಡು ರೈತರು ಜೀವನ ನಡೆಸುತ್ತಿರುವುದನ್ನು ತಡೆಯಲು ಹುನ್ನಾರ ಮಾಡುವುದು ಸರಿಯಲ್ಲ. ಅದೇ ವಾರ್ಡಿನ ಬಹುತೇಕ ಮನೆಗಳ ಶೌಚಾಲಯದ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸುತ್ತಿದ್ದರೂ ಮೌನವಾಗಿರುವ ಸದಸ್ಯರು, ರೈತರು ಬಳಸುವ ಚರಂಡಿ ನೀರಿನಿಂದ ದುರ್ವಾಸನೆ ಬರುತ್ತದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದರು.
ತಾಲ್ಲೂಕಿನಾದ್ಯಂತ ಬಹುತೇಕ ರೈತರು ಚರಂಡಿ ನೀರು ಬಳಸಿ ವ್ಯವಸಾಯ ಮಾಡುತ್ತಿದ್ದಾರೆ. ಈ ಬಗ್ಗೆ ನಿಮಗೇನಾದರೂ ತೊಂದರೆಯಿದ್ದರೆ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ನೀಡಿ. ಅದು ಬಿಟ್ಟು ರೈತರನ್ನು ಆರೋಪಿಗಳಂತೆ ಬಿಂಬಿಸುವುದನ್ನು ಕೂಡಲೇ ಬಿಡಬೇಕು. ಇದೇ ರೀತಿ ರೈತರಿಗೆ ಕಿರುಕುಳ ನೀಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರೈತರೆಲ್ಲಾ ಸೇರಿ ಕಾನೂನು ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದರು.
ರೈತ ಮುಖಂಡರಾದ ಬಿ.ಕೆ.ಚೇತನ್, ಬಿ.ಲಕ್ಷ್ಮಣ್, ಲಕ್ಷ್ಮಿನಾರಾಯಣ, ದೇವರಾಜ್, ಅಶ್ವತ್ಥಪ್ಪ, ಯತೀಶ್, ಬಾಸ್ಕರ್, ಗಂಗಾಧರ್, ಹರೀಶ್, ಆರ್.ಮಂಜುನಾಥ್, ವೆಂಕಟೇಶ್ ಹಾಜರಿದ್ದರು.