Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಎಡೆ ಬಿಡದೆ ಸುರಿದ ಭಾರಿ ಮಳೆಯ ನೀರು ರೈತರ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ದ್ರಾಕ್ಷಿ, ಹಿಪ್ಪುನೇರಳೆ ಸೊಪ್ಪು, ಹೂ ಬೆಳೆಗಳ ತೋಟಗಳಲ್ಲೆಲ್ಲಾ ನೀರು ನಿಂತಿದ್ದು, ರೈತರು ಕಂಗಾಲಾಗುವಂತಾಗಿದೆ.
ಭಾನುವಾರ ರಾತ್ರಿ ಬಿದ್ದ ಭಾರೀ ಮಳೆಗೆ ಬೆಳ್ಳೂಟಿ, ಭಕ್ತರಹಳ್ಳಿ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗ್ರಾಮಗಳಲ್ಲಿ ಹಿಪ್ಪುನೇರಳೆ ಸೊಪ್ಪಿನ ತೋಟಗಳೆಲ್ಲ ನೀರಿನಲ್ಲಿ ಮುಳುಗಡೆಯಾಗಿವೆ. ಇಲಾಖೆ ವತಿಯಿಂದ ರೈತರ ತೋಟಗಳಿಗೆ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆ ಮಾಡಿ ನಷ್ಟದ ಪ್ರಮಾಣವನ್ನು ಗುರುತಿಸುತ್ತಿದ್ದೇವೆ. ವರದಿಯನ್ನು ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ನೀಡುತ್ತೇವೆ. ತಾಲ್ಲೂಕಿನಲ್ಲಿ ಸುಮಾರು 25 ಎಕರೆಯಷ್ಟು ಹಿಪ್ಪುನೇರಳೆ ಸೊಪ್ಪಿನ ತೋಟ ಮುಳುಗಡೆಯಾಗಿದೆ. ಇನ್ನೂ ಸಮೀಕ್ಷೆ ನಡೆಸುತ್ತಿದ್ದೇವೆ. ತೊಂದರೆಗೊಳಗಾದ ರೇಷ್ಮೆ ಬೆಳೆಗಾರ ರೈತರು ನಮಗೆ ಮಾಹಿತಿ ನೀಡಬಹುದು. ಅವನ್ನೆಲ್ಲಾ ಸಮೀಕ್ಷೆ ಮಾಡಿ, ಬೆಳೆ ಪರಿಹಾರಕ್ಕಾಗಿ ಮಾಡುವ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.
ನಗರ ಹೊರ ಭಾಗದ ನಲ್ಲಿಮರದಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಹೂವಿನ ತೋಟಗಳಿಗೆ ನೀರು ನುಗ್ಗಿದೆ. ಬೆಳೆಯು ಸಂಪೂರ್ಣವಾಗಿ ನಷ್ಟವಾಗಿದೆ. ಸೇವಂತಿಕೆ ಬೆಳೆಯು ಹತ್ತು ಹೆಕ್ಟೇರ್ ನಷ್ಟು, ಐದು ಹೆಕ್ಟೇರ್ ಕೋಸು, 10 ಹೆಕ್ಟೇರ್ ಟೊಮ್ಯಾಟೊ, 3 ಹೆಕ್ಟೇರ್ ಹೂಕೋಸು, ಒಮ್ದು ಹೆಕ್ಟೇರ್ ಮೆಣಸಿನಕಾಯಿ, ನಾಲ್ಕು ಹೆಕ್ಟೇರ್ ಶುಂಠಿ ಸೇರಿದಂತೆ ತಾಲ್ಲೂಕಿನಲ್ಲಿ 33 ಹೆಕ್ಟೇರ್ ನಷ್ಟವಾಗಿದೆ. ಹನ್ನೊಂದು ಎಕರೆಯಷ್ಟು ಹಿಪ್ಪುನೇರಳೆ ಸೊಪ್ಪು ನಾಶವಾಗಿದೆ ಎಂದು ಆರ್.ಐ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ರಾಳ್ಳಕೆರೆಯು ತುಂಬಿದ್ದು, ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದೆ. ಕಳೆದ ವಾರವೇ ತುಂಬಿದ್ದ ರಾಳ್ಳಕೆರೆಯ ನೀರು ಕಾಲುವೆ ಮೂಲಕ ಬೆಳ್ಳೂಟಿ ಕೆರೆಯ ಕಡೆಗೆ ಹೋಗುತ್ತಿತ್ತು. ರಾತ್ರಿಯ ಜೋರು ಮಳೆಗೆ ನೀರು ರಸ್ತೆಯ ಮೇಲೆ ಬಂದಿದೆ. ಸುಮಾರು ಹತ್ತು ಕೆರೆಗಳು ಕೋಡಿ ಹರಿದು ರಾಳ್ಳಕೆರೆಗೆ ಬಂದು ಅದೀಗ ಕೋಡಿ ಹರಿಯುತ್ತಿದೆ. ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆಗಳು ತುಂಬಿ ರಾಳ್ಳಕೆರೆಗೆ ನೀರು ಹರಿದು ಬಂದು ಅದೂ ಕೂಡ ಕೋಡಿ ಬಿದ್ದಿದೆ. ಇಲ್ಲಿಂದ ನೀರು ಹರಿದು ಬೆಳ್ಳೂಟಿ ಕೆರೆಗೆ ಹೋಗುತ್ತಿದೆ.
ಗ್ರಾಮದ ಹಿರಿಯರಾದ ಗೋವಿಂದರಾಜು ಮಾತನಾಡಿ, “ರಾಳ್ಳಕೆರೆ 51 ಎಕರೆ 20 ಗುಂಟೆಯಷ್ಟಿದೆ. ಇದೀಗ ಕೆರೆ ತುಂಬಿ ಹರಿಯುತ್ತಿದೆ. ಅಮ್ಮನಕೆರೆ ಮತ್ತು ರಾಳ್ಳಕೆರೆಯ ಅಚ್ಚುಕಟ್ಟಿನಲ್ಲಿ ಸುಮಾರು ಐದು ನೂರು ಎಕರೆಯಷ್ಟು ಜಮೀನುಗಳಿವೆ. ಶಿಡ್ಲಘಟ್ಟ ಬೆಂಗಳೂರು ನಡುವಿನ ಮುಖ್ಯ ರಸ್ತೆಯಲ್ಲಿ ಇದುವರೆಗೂ ಸಮರ್ಪಕವಾಗಿ ಮೋರಿ ನಿರ್ಮಾಣ ಮಾಡದ ಕಾರಣ ಇದೀಗ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ತಲೆದೋರಿತ್ತು. ಈಗಲಾದರೂ ಜನಪ್ರತಿನಿಧಿಗಳು ಉತ್ತಮವಾದ ಸೇತುವೆ ನಿರ್ಮಿಸಲಿ, ನಷ್ಟವುಂಟಾಗಿರುವ ರೈತರಿಗೆ ಪರಿಹಾರ ನೀಡಲಿ. ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವವರು ಸ್ವಯಂ ಪ್ರೇರಿತರಾಗಿ ತೆರವು ಮಾಡಬೇಕು” ಎಂದು ಹೇಳಿದರು.
ರಾಜಕಾಲುವೆ ಒತ್ತುವರಿ ಪರಿಣಾಮ, ತೋಟಗಳು ಮುಳುಗಡೆ :
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿಯಾದ ಪರಿಣಾಮ ಮಳೆ ನೀರು ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ದ್ರಾಕ್ಷಿ, ಟೊಮೆಟೋ, ಬೀನ್ಸ್, ಹಿಪ್ಪುನೇರಳೆ ಸೊಪ್ಪು ಮುಂತಾದ ಬೆಳೆಗಳಿಗೆಲ್ಲಾ ನೀರು ನುಗ್ಗಿ ರೈತರಿಗೆ ನಷ್ಟವಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಉಂಟಾಗಿತ್ತು. ಕಪ್ಪು ಭೂಮಿ ಇರುವುದರಿಂದ ನೀರು ಬೇಗ ಇಮುರುವುದಿಲ್ಲ. ಇನ್ನು ಕನಿಷ್ಠ ಒಂದು ತಿಂಗಳು ತೋಟಗಳ ಒಳಕ್ಕೆ ಹೋಗಲು ಅಸಾಧ್ಯ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಈ ಭಾಗದಲ್ಲಿ ಜನರು ಸಂಚರಿಸುವ ಗಂಗನಹಳ್ಳಿ ಮತ್ತು ಅಪ್ಪೇಗೌಡನಹಳ್ಳಿ ನಡುವಿನ ರಸ್ತೆ ಕೊಚ್ಚಿಹೋಗಿ ಕೆರೆಯಂತಾಗಿದೆ ಎಂದು ಅಪ್ಪೇಗೌಡನಹಳ್ಳಿ ಮುನಿರೆಡ್ಡಿ ಕೋರಿದರು.
ಕುಸಿದ ಮನೆ :
ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಕಾಕಚೊಕ್ಕಂಡಹಳ್ಳಿ ಗ್ರಾಮದಲ್ಲಿ ರಾತ್ರಿ ಬಿದ್ದ ಮಳೆಗೆ ಎರಡು ಮನೆಗಳ ಗೋಡೆಗಳು ಕುಸಿದಿವೆ. ನಾಗರಾಜ್ ಮತ್ತು ವೆಂಕಟೇಶಪ್ಪ ಅವರ ಮನೆಗಳು ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಹಾನಿಯಾಗಿ ಗೋಡೆಗಳು ಬಿದ್ದಿವೆ. ಕುಟುಂಬದವರು ಹೊರಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೊಟ್ಟಿಗೆಯಲ್ಲಿದ್ದ ಹಸುವು ಕೂಡ ತಪ್ಪಿಸಿಕೊಂಡು ಹೊರ ಬಂದಿದೆ. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವುದಾಗಿ ಬರವಸೆ ನೀಡಿದ್ದಾರೆ.
ತಾಲ್ಲೂಕಿನ ಪಲ್ಲಿಚೇರ್ಲು ಗ್ರಾಮದಲ್ಲಿ ಮೂರು ಮನೆ, ಹಿತ್ತಲಹಳ್ಳಿ, ಚೀಮನಹಳ್ಳಿ, ಪಾಯ್ಲಹಳ್ಳಿ ಮತ್ತು ಮಲ್ಲಹಳ್ಳಿಯಲ್ಲಿ ಒಂದೊಂದು ಮನೆಗಳು ಬಿದ್ದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.