Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಬಿದ್ದ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ಬೆಳೆಗಳು ನಾಶವಾಗಿವೆ. ಕೆಲವೆಡೆ ರೇಷ್ಮೆ ಹುಳು ಮನೆಗಳ ಶೀಟುಗಳು ಹಾರಿಹೋಗಿವೆ.
ತಾಲ್ಲೂಕಿನ ಕೊತ್ತನೂರು, ಕದಿರಿನಾಯಕನಹಳ್ಳಿ, ವೈ.ಹುಣಸೇನಹಳ್ಳಿ, ಶೀಗೆಹಳ್ಳಿ, ಗೊರಮಡುಗು, ಎ.ಹುಣಸೇನಹಳ್ಳಿ, ತಲದುಮ್ಮನಹಳ್ಳಿ ಮುಂತಾದ ಗ್ರಾಮಗಳಲ್ಲಿ ಬಿದ್ದ ಆಲೀಕಲ್ಲಿನ ಮಳೆಯಿಂದಾಗಿ ಮಾವಿನ ತೋಪುಗಳಲ್ಲಿ ಮಾವಿನ ಕಾಯಿಗಳೆಲ್ಲಾ ಉದುರಿ ರೈತರಿಗೆ ಅಪಾರ ನಷ್ಟವುಂಟಾಗಿದೆ. ಮಾವಿನ ಕಾಯಿಗಳು ಕೀಳುವ ಹಂತದಲ್ಲಿದ್ದವು. ಅವನ್ನು ಮಾರುಕಟ್ಟೆಗೆ ಹಾಕಿ ವರ್ಷದ ಫಲವನ್ನು ರೈತ ಪಡೆಯುವ ಹಂತದಲ್ಲಿ ಪ್ರಕೃತಿ ಮುನಿದು, ರೈತರಿಗೆ ಶ್ರಮದ ಪ್ರತಿಫಲ ಕೊಚ್ಚಿಕೊಂಡು ಹೋಗಿದೆ.
ಹಿಪ್ಪುನೇರಳೆ ಸೊಪ್ಪು, ಟೊಮ್ಯಾಟೋ, ತರಕಾರಿ, ದಾಳಿಂಬೆ ಮುಂತಾದ ಬೆಳೆಗಳು ಆಲಿಕಲ್ಲಿನ ಮಳೆ ಹಾಗೂ ಗಾಳಿಗೆ ಸಿಲುಕಿ ನಷ್ಟವಾಗಿದೆ. ಕೆಲವೆಡೆ ಮರಗಳು ಉರುಳಿಬಿದ್ದಿದ್ದರೆ, ಇನ್ನು ಕೆಲವೆಡೆ ವಿದ್ಯುತ್ ಕಂಬಗಳೇ ನೆಲಕ್ಕುರುಳಿವೆ.
ಕೊತ್ತನೂರಿನ ದೊಡ್ಡಮುನಿಯಪ್ಪ, ಚಿಕ್ಕಗಂಗಪ್ಪ, ನಾರಾಯಣಮ್ಮ, ಚಿಕ್ಕನರಸಿಂಹಯ್ಯ ಮತ್ತಿತರರ ಮಾವಿನ ತೋಟಗಳು ಸಂಪೂರ್ಣ ನಾಶವಾಗಿದೆ. ಹಾಗೆಯೇ ಗ್ರಾಮದ ನಾರಾಯಣಪ್ಪ ಎಂಬುವರ ರೇಷ್ಮೆ ಸಾಕಾಣಿಕೆ ಮನೆ ಸೇರಿದಂತೆ ಕೆಲವು ಕುಟುಂಬಗಳು ವಾಸವಿದ್ದ ಕೆಲ ಮನೆಗಳ ಮೇಲಿನ ಚಾವಣಿಯು ಸಹ ಹಾರಿಹೋಗಿದೆ. ಇನ್ನು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿದ್ದು ಲಕ್ಷಾಂತರ ರೂ ಹಾನಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತಲದುಮ್ಮನಹಳ್ಳಿ ಬಳಿ ಆಲೀಕಲ್ಲು ಮಳೆಗೆ ರಸ್ತೆ ಬದಿಯಲ್ಲಿದ್ದ ಹಲವು ಮರಗಳು ನೆಲಕ್ಕುರುಳಿವೆ.
ಎ.ಹುಣಸೇನಹಳ್ಳಿ ಗ್ರಾಮದ ಮುನಿರಾಜು ಎಂಬುವವರು ಸುಮಾರು ಒಂದು ಎಕರೆಯಲ್ಲಿ ಒಂದು ಲಕ್ಷ ರೂಗಳಿಗೂ ಹೆಚ್ಚು ಖರ್ಚು ಮಾಡಿ ನಾಟಿ ಮಾಡಿದ್ದ ಟೊಮೇಟೋ ಬೆಳೆ ನಾಶವಾಗಿದೆ. ಅದರ ಜೊತೆಯಲ್ಲಿ ಅವರ ಹಿಪ್ಪುನೇರಳೆ ಸೊಪ್ಪಿನ ತೋಟವೂ ಕೂಡ ಸಂಪೂರ್ಣವಾಗಿ ಹಾಳಾಗಿದೆ.