ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಕೆರೆಯು ಕೋಡಿ ಹರಿದಿದ್ದು, ನೀರು ಮುಂದೆ ಹರಿಯಲು ಮೊದಲಿದ್ದ ಭಕ್ತರಹಳ್ಳಿ ನಾರವಾಳ ರಾಜಕಾಲುವೆ ಒತ್ತುವರಿಯಾದ ಕಾರಣ, ಭಕ್ತರಹಳ್ಳಿ ಪಕ್ಕದಿಂದ ಕಾಕಚೊಕ್ಕಂಡಹಳ್ಳಿ ಹಾದು ಭದ್ರನ ಕೆರೆ ತಲುಪಬೇಕಿದ್ದ ನೀರು ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಜಮೀನುಗಳ ಮೇಲೆ ಹರಿದಿದೆ. ತಾಲ್ಲೂಕಿನ ಭಕ್ತರಹಳ್ಳಿ, ಬೆಳ್ಳೂಟಿ, ಮೇಲೂರು, ಚೌಡಸಂದ್ರ ವ್ಯಾಪ್ತಿಯ ಸುಮಾರು 1200 ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದ್ದು, ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆ, ರಾಳ್ಳಕೆರೆಗಳು ತುಂಬಿ ನೀರು ಹರಿದು ಬೆಳ್ಳೂಟಿ ಕೆರೆಗೆ ಬಂದು, ಬೆಳ್ಳೂಟಿ ಕೆರೆಯೂ ಕೋಡಿ ಹರಿದಿದೆ. ಬೆಳ್ಳೂಟಿ ಕೆರೆಯಿಂದ ಕೋಡಿ ಹರಿದ ನೀರು ಮುಂದೆ ಭದ್ರನ ಕೆರೆಗೆ ಹೋಗಲು ಮಾಡಿರುವ ನಾರವಾಳ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಹಲವು ಬಾರಿ ಸುತ್ತಲಿನ ಗ್ರಾಮಸ್ಥರು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ನೀರು ಹರಿದು ಹೋಗಲು ಕಾಲುವೆ ಇರದ ಕಾರಣ ಜಮೀನುಗಳ ಮೇಲೆಲ್ಲಾ ಹರಿದಿದೆ.
“ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕೆಂದು ನಾವು ರೈತ ಸಂಘದಿಂದ ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಅವರ ನಿರ್ಲಕ್ಷ್ಯದಿಂದ ಇದೀಗ ನಾಲ್ಕೈದು ಗ್ರಾಮಗಳ ರೈತರು ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ನಮ್ಮ ತೋಟದಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದಿದ್ದೆ. ನೀರು ನುಗ್ಗಿದ್ದರಿಂದ ವಿಧಿಯಿಲ್ಲದೇ ಅವನ್ನೆಲ್ಲಾ ನೀರಿನಲ್ಲಿ ನಿಂತುಕೊಂಡೇ ಕತ್ತರಿಸಬೇಕಾಯಿತು” ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ಈ ಭಾಗದಲ್ಲಿ ದೀರ್ಘಾವಧಿ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಸೀಬೆ ಮುಂತಾದ ಬೆಳೆಗಳನ್ನು ಸಾಕಷ್ಟು ಮಂದಿ ರೈತರು ಬೆಳೆದಿದ್ದು, ಬೆಳೆಗಳಿರುವ ಜಮೀನುಗಳೆಲ್ಲ ಜಲಾವೃತಗೊಂಡಿವೆ. ಈ ಭಾಗದಲ್ಲಿ ಬೀಟ್ ರೂಟ್, ಕ್ಯಾರೆಟ್, ಶುಂಠಿ ಮುಂತಾದ ತರಕಾರಿ ಬೆಳೆಗಳೂ ಸಾಕಷ್ಟು ಇವೆ. ರಾಗಿ ಬೆಳೆಯಂತೂ ಸಂಪೂರ್ಣ ನೆಲಕಚ್ಚಿದೆ.
“ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲೂರು ಹಾಗೂ ಚೌಡಸಂದ್ರ, ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂಟಿ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಭಕ್ತರಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಕಾಲುವೆಯಲ್ಲಿ ಹರಿಯಬೇಕಾದ ನೀರು ನುಗ್ಗಿದೆ. ಇದರಿಂದ ಈ ಭಾಗದ ರೈತರಿಗೆಲ್ಲಾ ತುಂಬಲಾರದ ನಷ್ಟವಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ಮುಚ್ಚಿರುವ ಕಾಲುವೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಆದರೆ ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ. ಈ ಪ್ರಮಾಣದ ಮಳೆ ಬರುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಈಗ ಕಾಲುವೆಯತ್ತ ಗಮನ ಹರಿಸದ ಅಧಿಕಾರಿಗಳೇ ರೈತರಿಗೆ ಸರ್ಕಾರದಿಂದ ನಷ್ಟ ಪರಿಹಾರ ಕೊಡಿಸಬೇಕು. ರಾಜಸ್ವ ನಿರೀಕ್ಷಕ ಶಶಿ ಅವರು ಬಂದು ನಮ್ಮ ಕಷ್ಟವನ್ನು ಕಣ್ಣಾರೆ ನೋಡಿದ್ದಾರೆ. ತಹಶೀಲ್ದಾರ್ ಅವರು ನಷ್ಟದ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಪರಿಹಾರ ಸಿಗಲು ನೆರವಾಗಬೇಕು. ಈಗಲಾದರೂ ರಾಜಕಾಲುವೆ ತೆರವು ಮಾಡಲು ಅಧಿಕಾರಿಗಳು ಮುಂದಾಗಬೇಕು” ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಒತ್ತಾಯಿಸಿದರು.
“ಸುಮಾರು 1200 ಎಕರೆಗಳಷ್ಟು ರೈತರ ಬೆಳೆಗಳ ಹಾನಿಗೆ ಯಾರು ಹೊಣೆ. ರಾಜಕಾಲುವೆ ಒತ್ತುವರಿ ಮಾಡಿರುವವರೋ ಅಥವಾ ತೆರವು ಮಾಡಿಸದ ಅಧಿಕಾರಿಗಳೋ. ಜಿಲ್ಲಾಧಿಕಾರಿಗಳು ಈ ಬಗ್ಗೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯವನ್ನು ರೈತರು ಕ್ಷಮಿಸುವುದಿಲ್ಲ” ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್.
ಈ ಸಂದರ್ಭದಲ್ಲಿ ಶಿವಕುಮಾರ್, ಭಾಗ್ಯಮ್ಮ ಪಿಡಿಓ ಶಾರದ, ಬಿ.ಸಿ.ಜನಾರ್ದನ್, ರೈತರಾದ ಮುನಿರಾಜು, ಶ್ರೀನಿವಾಸ್ ಮೂರ್ತಿ, ಹರೀಶ್, ಮಂಜುನಾಥ್, ಪ್ರದೀಪ್, ಎಸ್.ಎಂ.ಶ್ರೀನಿವಾಸ್, ಗೋಪಾಲ್, ಆರ್.ಐ.ಶಶಿಧರ್ ಹಾಜರಿದ್ದರು.