Kothanur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಮಡಗು ಗ್ರಾಮದ ನಿವಾಸಿ ವೆಂಕಟಮ್ಮಎಂಬ ವೃದ್ದೆಯ ಮನೆ ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆಗೆ ಕುಸಿದಿದೆ.
ವೆಂಕಟಮ್ಮ ಹಲವು ವರ್ಷಗಳಿಂದ ತನ್ನ ಮೊಮ್ಮಗನ ಜೊತೆ ವಾಸಿಸುತ್ತಿದ್ದಳು. ಬುಧವಾರ ರಾತ್ರಿ ಬಿದ್ದ ಮಳೆಗೆ ಮನೆಯು ಕುಸಿದು ಬಿದ್ದಿದೆ.
ಸ್ಥಳಕ್ಕೆ ಉಪ ತಹಶೀಲ್ದಾರ್ ಪೂರ್ಣಿಮಾ ಭೇಟಿ ನೀಡಿ ಮನೆಯನ್ನು ಪರಿಶೀಲಿಸಿ ವೃದ್ದೆಯನ್ನು ಬೇರೊಂದು ಮನೆಗೆ ಸ್ಥಳಾಂತರ ಮಾಡಿಸಿ ಆರೋಗ್ಯ ವಿಚಾರಣೆ ಮಾಡಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ, “ಮೊನ್ನೆಯಿಂದ ಸುರಿದ ಮಳೆಗೆ ಗೊರಮಡಗು ಗ್ರಾಮದಲ್ಲಿ ಇರುವ ವೃದ್ದೆಯ ಮನೆ ಕುಸಿದಿದೆ. ಸಂಪೂರ್ಣವಾಗಿ ಪರಿಶೀಲನೆ ಮಾಡಿದ್ದೇನೆ. ಶೇ 80 ರಷ್ಟು ಮನೆಗೆ ಹಾನಿಯಾಗಿದೆ.
ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಅದಷ್ಟು ಬೇಗ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತದೆ. ಇವರಿಗೆ ವೃದ್ದಾಪ್ಯ ವೇತನ, ವಿಧವಾ ವೇತನ ಮತ್ತು ಪಿ.ಎಚ್.ಪಿ ಪೆನ್ಷನ್ ಪರಿಶೀಲನೆ ಆಗಿದೆ. ಆದಷ್ಟು ಬೇಗ ಸರ್ಕಾರದಿಂದ ಈ ಕುಟುಂಬಕ್ಕೆ ಎಲ್ಲಾ ಸೌಲಭ್ಯಗಳನ್ನು ಬರುವಂತೆ ಮಾಡುತ್ತೇನೆ” ಎಂದರು.
ಮೂಲಭೂತ ಸೌಕರ್ಯ
ಹಲವು ವರ್ಷಗಳಿಂದ ಈ ಗ್ರಾಮದ ದಲಿತ ಕಾಲೋನಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತ ಆಗಿದ್ದು, ಚರಂಡಿ,ಸಿಸಿ ರಸ್ತೆಗಳ ಅಭಿವೃದ್ಧಿ ಆಗಬೇಕಿದೆ. ಗೋಮಾಳ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿರುವುದರಿಂದ ಹಕ್ಕು ಪತ್ರಗಳು ಇಲ್ಲದೇ ಪರದಾಡುತ್ತಿದ್ದಾರೆ.
ಸರ್ವೇ ನಂಬರ್ ನಲ್ಲಿ ಮನೆ ನಿರ್ಮಾಣ ಆಗಿದೆ ಅದಾಷ್ಟು ಬೇಗ ಅಕ್ರಮ ಸಕ್ರಮ ಮಾಡಲು ತಾವು ದಯವಿಟ್ಟು ಪರಿಶೀಲಿಸಿ ಬಡವರಿಗೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ಪತ್ರದ ಮೂಲಕ ನಮಗೆ ಕೊಡಿ ನಂತರ ಪರಿಶೀಲಿಸಿ ಸರ್ವೇ ಮಾಡಿ ಕ್ರಮವಹಿಸಲಾಗುವುದು ಎಂದು ಗ್ರೇಡ್2 ತಹಶೀಲ್ದಾರ್ ಪೂರ್ಣಿಮಾ ಗ್ರಾಮಸ್ಥರಿಗೆ ತಿಳಿಸಿದರು.
ಗ್ರಾಮ ಲೆಕ್ಕಾಧಿಕಾರಿ ರೇವಣ ಸಿದ್ದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್, ನಾರಾಯಣಸ್ವಾಮಿ, ಸದಸ್ಯ ವೆಂಕಟರೋಣಪ್ಪ, ಮಂಜುನಾಥ್, ಮುನಿವೀರಪ್ಪ, ಮುನಿಗಂಗಪ್ಪ, ಶ್ರೀರಾಮಪ್ಪ ಹಾಜರಿದ್ದರು.