
ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಪೋಲಿಯೊ ನಿರ್ಮೂಲನೆ ಮಾಡುವಲ್ಲಿ 1995ರಿಂದ ಪಲ್ಸ್ ಪೋಲಿಯೊ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಕೊಡಿಸುವಂತಾಗಬೇಕು ಎಂದು ಅವರು ತಿಳಿಸಿದರು.
ಈ ಹಿಂದೆ ವರ್ಷಕ್ಕೆ ಎರಡು ಬಾರಿ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಳ್ಳಲಾಗುತ್ತಿತ್ತು, ಕೋವಿಡ್ ನಂತರ ವರ್ಷಕೊಮ್ಮೆ ಕಾರ್ಯಕ್ರಮ ನಡೆಯುತ್ತಿದ್ದು, ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ತಾಲ್ಲೂಕಿನಾದ್ಯಂತ 0-5 ವರ್ಷದ 24 ಸಾವಿರ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಿದ್ದೇವೆ. ತಾಲ್ಲೂಕಿನಾದ್ಯಂತ 106 ಬೂತ್ ಗಳನ್ನು ಸ್ಥಾಪಿಸಲಾಗಿದೆ. ಒಂದೊಂದರಲ್ಲೂ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುವರು. ನಾಳೆಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಮನೆ ಭೇಟಿ ನೀಡುತ್ತಾರೆ. ಒಟ್ಟಾರೆ ಶೇ 100 ರಷ್ಟು ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದರು.
ನಗರಸಭೆ ಆಯುಕ್ತ ಶ್ರೀಕಾಂತ್, ಸದಸ್ಯ ಕೃಷ್ಣಮೂರ್ತಿ, ಬಿಸಿಎಂ ಇಲಾಖೆಯ ನಾರಾಯಣಪ್ಪ, ಡಾ.ಯಶ್ವಂತ್, ಆರೋಗ್ಯ ಇಲಾಖೆಯ ದೇವರಾಜ್, ಲೋಕೇಶ್, ಮುನಿರತ್ನಮ್ಮ ಹಾಜರಿದ್ದರು.