Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳ ಬಳಿ NPS ನೌಕರರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ, ದೇಶಾದ್ಯಂತ ಎನ್.ಪಿ.ಎಸ್ ವಿರೋಧಿಸಿ ನೌಕರರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಒ.ಪಿ.ಎಸ್ ಜಾರಿಗೊಳಿಸುವ ಬದಲು ಯು.ಪಿ.ಎಸ್ ಅಂದರೆ ಯೂನಿಫೈಡ್ ಪೆಶ್ಷನ್ ಸ್ಕೀಮ್ ( ಏಕೀಕೃತ ಪಿಂಚಣಿ ಯೋಜನೆ) ಜಾರಿಗೊಳಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ನೌಕರರ ಸಂಘಟನೆಗಳ ಮುಖಂಡರ ಸಭೆ ನಡೆಸಿ ನಿವೃತ್ತಿಯ ನಂತರ ನೌಕರರಿಗೆ ಶೇ 50 ರಷ್ಟು ಪಿಂಚಣಿ ನೀಡುವ ಭರವಸೆಯನ್ನು ನೀಡಿದ್ದಾರೆ. ಅದರೆ ಯು.ಪಿ.ಎಸ್ ಸಹ ಎನ್.ಪಿ.ಎಸ್ ಯೋಜನೆಯ ಇನ್ನೊಂದು ಮುಖವಾಗಿದ್ದು ನೌಕರರ ಪಿಂಚಣಿಗಾಗಿ ವೇತನದಲ್ಲಿ ಶೇ 10 ರಷ್ಟು ಕಡಿತಗೊಳಿಸುವುದು ಮುಂದುವರೆಯಲಿದೆ. ನಿವೃತ್ತಿ ನಂತರ ನೌಕರರ ವೇತನದಲ್ಲಿ ಹಿಡಿದಿರುವ ಮೊತ್ತದ ಶೇ 60 ರಷ್ಟುಇಡಿಗಂಟನ್ನು ನೌಕರರಿಗೆ ಹಿಂದಿರುಗಿಸುವ ಬಗ್ಗೆ ಖಚಿತತೆ ಇಲ್ಲ.
ಹಾಗಾಗಿ ನೌಕರರ ಭವಿಷ್ಯಕ್ಕೆ ಮಾರಕವಾಗಿರುವ ಎನ್.ಪಿ.ಎಸ್ ಮತ್ತು ಯು.ಪಿ.ಎಸ್ ಎರಡೂ ವಿರೋಧಿಸಿ ಇಂದು ನೌಕರರು ಕಪ್ಪು ಪಟ್ಟಿ ಕಟ್ಟಿ ಕರ್ತವ್ಯ ನಿರ್ವಹಿಸುವ ಮೂಲಕ ಒ.ಪಿ.ಎಸ್ ಮರುಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿದ್ದೇವೆ ಎಂದರು.
ಶಿಡ್ಲಘಟ್ಟ ತಹಶೀಲ್ದಾರರ ಕಚೇರಿ, ತಾಲ್ಲೂಕು ಪಂಚಾಯತಿ, ಸಾರ್ವಜನಿಕ ಆಸ್ಪತ್ರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ನೌಕರರು ಕಪ್ಪು ಪಟ್ಟಿ ಧರಿಸಿ ಒ.ಪಿ.ಎಸ್ ಗೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಎನ್.ಪಿ.ಎಸ್ ಹಾಗೂ ಒ.ಪಿ.ಎಸ್ ಎಲ್ಲಾ ನೌಕರರು ತಾಲ್ಲೂಕು ಮಟ್ಟದ ಅಧಿಕಾರಿಗಳು ಬೆಂಬಲ ನೀಡಿದರು.
ತಾಲ್ಲೂಕು ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಗಜೇಂದ್ರ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿ ಮೋಹನ್, ಶಿಕ್ಷಕರಾದ ಅಶ್ವತಪ್ಪ , ವೆಂಕಟೇಶ್, ನಂದೀಶ್ , ನಬೀ ಸಾಹೇಬ್ , ಪರಮೇಶ್ ಹಾಗೂ ರವಿ ಸೇರಿದಂತೆ ವಿವಿಧ ಇಲಾಖೆಯ ನೌಕರರು ಹಾಜರಿದ್ದರು.