Sidlaghatta : ಮುಜರಾಯಿ ಇಲಾಖೆಗೆ ಸೇರಿದ ಅಥವಾ ಇತರೆ ದೇವಾಲಯಗಳಲ್ಲಿ ಪ್ರತಿ ತಿಂಗಳು ಹುಂಡಿಗಳನ್ನು ತೆಗೆದು ಅದರಲ್ಲಿರಬಹುದಾದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಶಿಡ್ಲಘಟ್ಟ ನಗರ ಠಾಣೆಯ ಎಸ್.ಐ ವೇಣುಗೋಪಾಲ್ ಅವರು ಅರ್ಚಕರಲ್ಲಿ ಮನವಿ ಮಾಡಿದರು.
ನಗರಠಾಣೆಯಲ್ಲಿ ನಡೆದ ದೇವಾಲಯಗಳ ಅರ್ಚಕರು ಮತ್ತು ದೇವಾಲಯಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಹುಂಡಿಯನ್ನು ತೆರೆದು ಅದರಲ್ಲಿನ ಹಣವನ್ನು ಎಣಿಕೆ ಮಾಡುವ ಪರಿಪಾಠ ಬಹಳಷ್ಟು ದೇವಾಲಯಗಳಲ್ಲಿ ಇದೆ.
ಇದು ಕಳ್ಳರು ಹುಂಡಿ ಮೇಲೆ ಕಣ್ಣಿಡಲು ಮತ್ತು ಕಳ್ಳತನ ಮಾಡಲು ಕಾರಣವಾಗುತ್ತಿದೆ. ಹಾಗಾಗಿ ದೇವಾಲಯಗಲ್ಲಿ ಪ್ರತಿ ತಿಂಗಳೂ ಹುಂಡಿ ಹಣ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಅಥವಾ ದೇವಾಲಯದ ಉಸ್ತುವಾರಿ ಸಮಿತಿಯ ನಿರ್ಣಯಗಳಿಗೆ ತಕ್ಕಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಇದರಿಂದ ಹುಂಡಿಗಳಲ್ಲಿ ಹಣ ಇರುವ ಪ್ರಮಾಣ ಕಡಿಮೆ ಆಗಲಿದೆ. ಕಳ್ಳತನ ನಡೆಯುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಇದಕ್ಕೂ ಮಿಗಿಲಾಗಿ ದೇವಾಲಯಗಳಿಗೆ ಬಹಳಷ್ಟು ವರ್ಷಗಳ ಹಿಂದಿನ ಬೀಗಗಳನ್ನು ಬಳಸಲಾಗುತ್ತಿದ್ದು ಅವುಗಳನ್ನು ಬದಲಿಸಿ ಹೊಸ ಮತ್ತು ಭದ್ರವಾದ ಬೀಗಗಳನ್ನು ದೇವಾಲಯಗಳಿಗೆ ಬಳಸುವಂತೆ ಮತ್ತು ಭದ್ರತೆಗೆ ಹೆಚ್ಚು ಒತ್ತು ನೀಡುವಂತೆ ಕೋರಿದರು.
ಇತ್ತೀಚೆಗೆ ದೇವಾಲಯಗಳಲ್ಲಿ ಹುಂಡಿ ಹಣ ಹಾಗೂ ದೇವರ ಮೂರ್ತಿಗಳಿಗೆ ಬಳಸುವ ಚಿನ್ನಾಭರಣ ಇನ್ನಿತರೆ ವಸ್ತುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.