Sidlaghatta : ಮಕ್ಕಳ ಕೈಗೆ ಈಗ ಮೊಬೈಲ್ ಬಂದಿದೆ. ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾವಣೆ ವಹಿಸಿರಬೇಕು. ಅವರ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶನ ಮಾಡಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಿಳಿಸಿದರು.
ನಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಕಚೇರಿಯಲ್ಲಿ ಸಂಘದ ಸದಸ್ಯರಿಗೆ ಪೊಲೀಸ್ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಯಾವುದೇ ದುಶ್ಚಟಗಳಿಗೆ ತುತ್ತಾಗದ ಹಾಗೆ ನೋಡಿಕೊಳ್ಳಬೇಕು. ಉತ್ತಮರೊಂದಿಗೆ ಗೆಳೆತನ ಮಾಡಬೇಕು. ತಾರುಣ್ಯಾವಸ್ಥೆಯಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಮೊಬೈಲ್ ಫೋನ್ ಬಳಕೆ ಮಿತವಾಗಿರಲಿ. ವಾಹನ ಚಾಲನೆ ಮಾಡುವ ಮುನ್ನ ಪರವಾನಗಿ ಬಹು ಮುಖ್ಯ, ಹೆಲ್ಮೆಟ್ ಬಳಕೆ ಸುರಕ್ಷತೆಗಾಗಿ ಎಂದು ಸಲಹೆ ನೀಡಿದರು.
ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವ ಬಗ್ಗೆ ಗಂಡು ಮಕ್ಕಳಿಗೆ ಮತ್ತು ಸಮಾಜದಲ್ಲಿ ಹೆಣ್ಣಿನ ಸುರಕ್ಷತೆಯ ಬಗ್ಗೆ ಎಳೆಯ ವಯಸ್ಸಿನಲ್ಲಿಯೇ ಪೋಷಕರು ಕಾಳಜಿಯಿಂದ ತಿಳಿವಳಿಕೆ ನೀಡಬೇಕು. ಮಕ್ಕಳು ಪೋಷಕರನ್ನು ನೋಡಿ ಅನುಕರಣೆ ಮಾಡುವುದರಿಂದ ಪೋಷಕರ ನಡವಳಿಕೆ ಜವಾಬ್ದಾರಿಯುತವಾಗಿರಲಿ ಎಂದರು.
ಧರ್ಮಸ್ಥಳ ಯೋಜನಾಧಿಕಾರಿ ಸುರೇಶ್ ಗೌಡ, ನಗರ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ವೇಣುಗೋಪಾಲ್, ಕ್ರೈಂ ಸಬ್ ಇನ್ಸ್ ಸ್ಪೆಕ್ಟರ್ ವೆಂಕಟರೋಣಪ್ಪ ಹಾಜರಿದ್ದರು.