Sidlaghatta : ಸಹಕಾರ ಬ್ಯಾಂಕ್ ನ್ನು ನಾವೆಲ್ಲರೂ ಪಕ್ಷಾತೀತವಾಗಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ PLD Bank ನ ಆವರಣದಲ್ಲಿ ಬುಧವಾರ ನಡೆದ ಬ್ಯಾಂಕ್ ನ 86 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಬ್ಯಾಂಕ್ ಆವರಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಸಾಲ ಮರುಪಾವತಿ ಆಗದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದಾಗ ರಾಜ್ಯ ಸರ್ಕಾರ ಅಸಲು ಸಾಲ ಪೂರ್ತಿ ಕಟ್ಟಿದರೆ ಬಡ್ಡಿ ಮನ್ನಾ ಘೋಷಣೆ ಮಾಡಿತ್ತು. ಆಗ ಬಹುತೇಕ ರೈತರು ಸಾಲವನ್ನು ಮರುಪಾವತಿ ಮಾಡಿದ್ದರಿಂದ ಬ್ಯಾಂಕ್ ಇದೀಗ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿದರು.
ಸಹಕಾರಿ ಬ್ಯಾಂಕುಗಳ ಮೂಲಕ ಸಿಗುವ ಸಾಲ ಇನ್ನಿತರೆ ಸವಲತ್ತುಗಳನ್ನು ಬ್ಯಾಂಕ್ ನ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು ಪಕ್ಷಾತೀತವಾಗಿ ಎಲ್ಲ ಅರ್ಹ ರೈತರಿಗೂ ತಲುಪಿಸುವ ಹಾಗೂ ಸಾಲ ವಸೂಲಾತಿಯನ್ನು ಕೂಡ ಅಷ್ಟೇ ಪ್ರಾಮಾಣಿಕವಾಗಿ ಮಾಡಬೇಕು. ಆಗ ಮಾತ್ರ ಸಹಕಾರಿ ಬ್ಯಾಂಕುಗಳು ಉಳಿಯುತ್ತವೆ ಎಂದರು.
ಪಿಎಲ್‌ಡಿ ಬ್ಯಾಂಕ್‌ನಿಂದ ಆವರಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಲಾಯಿತು.
ಬ್ಯಾಂಕ್ ನ ಅಧ್ಯಕ್ಷ ಡಿ.ಸಿ.ರಾಮಚಂದ್ರ, ಉಪಾಧ್ಯಕ್ಷ ನಾರಾಯಣಪ್ಪ, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ, ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್, ಬಂಕ್ ಮುನಿಯಪ್ಪ, ಭೀಮೇಶ್, ರವಿ, ವೆಂಕಟೇಶ್, ಸುರೇಶ್, ಎ. ನಾಗರಾಜ್, ವ್ಯವಸ್ಥಾಪಕಿ ಟಿ.ಸಿ.ಶ್ಯಾಮಲ, ನಿವೃತ್ತ ವ್ಯವಸ್ಥಾಪಕ ಕೃಷ್ಣನ್, ಮೇಲ್ವಿಚಾರಕ ಆರ್.ಶ್ರೀನಾಥ್ ಹಾಜರಿದ್ದರು.