Tummanahalli, Sidlaghatta : ಮಣ್ಣಿಗೆ ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತಿದೆ. ಹೆಚ್ಚಿನ ಫಸಲಿನ ನಿರೀಕ್ಷೆಯಲ್ಲಿ ಅತಿಯಾಗಿ ಬಳಸುತ್ತಿರುವ ರಾಸಾಯನಿಕಗಳಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆಯಲ್ಲದೆ ಅವುಗಳ ಉತ್ಪನ್ನಗಳನ್ನು ತಿನ್ನುವ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರದ್ಯಾಪಕ ಡಾ.ಎಂ.ಟಿ.ಸಂಜಯ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಯ ಸಮಗ್ರ ಕೃಷಿ ಪದ್ಧತಿಯಡಿ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ Organic Farming ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತಿ ಬೇಗ ಮತ್ತು ಅತಿಯಾದ ಫಸಲು ಪಡೆಯುವ ಧಾವಂತದಲ್ಲಿ ಸಾಕಷ್ಟು ರೈತರು ಹೆಚ್ಚು ಪ್ರಮಾಣದ ರಸಗೊಬ್ಬರಗಳನ್ನು, ಕ್ರಿಮಿ ನಾಶಕಗಳನ್ನು ಬಳಸುತ್ತಿದ್ದು ಅದು ತಾತ್ಕಾಲಿಕವಾಗಿ ಲಾಭ ತಂದು ಕೊಡಬಹುದು.
ಆದರೆ ಭವಿಷ್ಯದಲ್ಲಿ ಬಹಳ ಸಂಕಷ್ಟವನ್ನು ತಂದುಕೊಡಲಿದೆ. ಅದರ ದುಷ್ಪರಿಣಾಮ ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ನೈಸರ್ಗಿಕ ಕೃಷಿಯನ್ನು ಅನುಸರಿಸಬೇಕು. ಇದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಜತೆಗೆ ಅದರಿಂದ ಸಿಗುವ ಉತ್ಪನ್ನಗಳ ಬಳಕೆಯಿಂದ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ನೈಸರ್ಗಿಕ ಕೃಷಿಯ ಮಹತ್ವದ ಬಗ್ಗೆ ವಿವರಿಸಿದರು.
ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ಸಸ್ಯ ಜನ್ಯ ಪೀಡೆನಾಶಕಗಳಾದ ಶುಂಠಿ ಅಸ್ತ್ರ, ಅಗ್ನಿ ಅಸ್ತ್ರ, ಬ್ರಹ್ಮಾಸ್ತ್ರ, ಹುಳಿ ಮಜ್ಜಿಗೆ ಇನ್ನಿತರೆ ಚಟುವಟಿಕೆಗಳ ಮೂಲಕ ನೈಸರ್ಗಿಕ ಕೃಷಿ ಕೈಗೊಳ್ಳುವ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.
ಸಹಾಯಕ ಪ್ರಾದ್ಯಾಪಕ ಎಂ.ಜೆ.ಅಂಜನ್ ಕುಮಾರ್ ಅವರು ಮಾತನಾಡಿ, ನೈಸರ್ಗಿಕ ಕೃಷಿಯಿಂದ ಲಾಭದಾಯಕ ಕೃಷಿ ನಡೆಸುವ ಬಗ್ಗೆ ತಿಳಿಸಿಕೊಟ್ಟರಲ್ಲದೆ ರೈತರೊಂದಿಗೆ ಸಂವಾದ ನಡೆಸಿ ರೈತರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ನೈಸರ್ಗಿಕ ಕೃಷಿ ಕುರಿತಾದ ರೈತರಲ್ಲಿನ ಅನುಮಾನಗಳನ್ನು ಪರಿಹರಿಸಿದರು.
ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರದ ಕಿರಿಯ ವಿಜ್ಞಾನಿ ಡಾ.ಪೂಜಾ ಕನ್ನೋಜಿಯಾ ಅವರು ನೈಸರ್ಗಿಕ ಕೃಷಿಯ ದೃಢೀಕರಣದ ನೀತಿ ನಿಯಮ, ಕಾನೂನು ಕಟ್ಟಲೆಗಳ ಬಗ್ಗೆ ವಿವರಿಸಿದರು.
ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರದ ವೈಭವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾರಮೇಶ್, ಸದಸ್ಯ ಮಂಜುನಾಥ್, ರೈತರಾದ ಬಚ್ಚರೆಡ್ಡಿ, ಪಾಪಣ್ಣ, ಮುನಿಚನ್ನಪ್ಪ, ಹನುಮಂತರಾಯಪ್ಪ, ಮುನಿರಾಜು, ಮಂಜುನಾಥ್, ಬಚ್ಚೇಗೌಡ ಹಾಜರಿದ್ದರು.