Bashettihalli, Sidlaghatta : ತರಕಾರಿ ಹಾಗು ಹಣ್ಣಿನ ಬೆಳೆಗಳ ಉತ್ತಮ ಫಸಲಿಗಾಗಿ ರೈತರು ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಮಣ್ಣಿನ ಮತ್ತು ಸಸಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಎಂದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಹೇಳಿದರು.
ತಾಲ್ಲೂಕಿನ ಬಶೆಟ್ಟಹಳ್ಳಿಯ ಶ್ರೀ ಗಂಗಾಭವಾನಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಟಮೋಟ ಹಾಗೂ ಇತರೆ ತೋಟಗಾರಿಕಾ ಬೆಳೆಗಳ ರೋಗ ನಿರ್ವಹಣೆ ಮತ್ತು ಕೃಷಿ ಪದ್ಧತಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೋಗಪೀಡಿತ ಸಸಿಗಳ ನಾಟಿ ಮಾಡುವುದರಿಂದ ಬಿಳಿ ನೊಣದ ಸಂತತಿ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿ ಸರಿಯಾಗಿ ಹೂ ಮತ್ತು ಕಾಯಿ ಬಿಡುವುದಿಲ್ಲ, ಕಾಲ ಕಾಲಕ್ಕೆ ಕೃಷಿ ಅಧಿಕಾರಿಗಳು ಹಾಗು ಕೃಷಿ ವಿಜ್ಞಾನಿಗಳ ಸಲಹೆ ಪಡೆದಲ್ಲಿ ರೋಗವನ್ನು ಹತೋಟಿಗೆ ತರಬಹುದು ಎಂದರು.
ಕೃಷಿ ಕ್ಷೇತ್ರದಲ್ಲಿ ಟಮೋಟ ಬೆಳೆಗೆ ತಗಲುವ ರೋಗಗಳು ಹಾಗೂ ಅವುಗಳ ನಿಯಂತ್ರಣಕ್ಕೆ ರೈತರು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ವಿವರಿಸಿದರು. ಸರಿಯಾದ ಮುಂಜಾಗ್ರತ ಕ್ರಮಗಳ ಬಳಕೆಯಿಂದ ರೈತರು ಬೆಳೆಗೆ ತಗಲುವ ರೋಗದಿಂದ ಬಾಧಿತರಾಗುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು.
ಟಮೋಟಾ ಬೆಳೆಗೆ ತಗಲುವ ಬಿಳಿ ನೊಣದ ರೋಗ ಹಾಗೂ ಇತರೆ ತರಕಾರಿ ಬೆಳೆಗಳಾದ ಎಲೆ ಕೋಸು, ಹೂಕೋಸು, ದಾಳಿಂಬೆ ಬೆಳೆಗಳಲ್ಲಿ ನಿಮಟೋಡ್ ನುಸಿರೋಗಾ ತಡಗಟ್ಟುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಐಸಿಎಆರ್-ಐಐಎಚ್‌ಆರ್ ತಯಾರಿತ ಅರ್ಕಾ ವೆಜಿಟೆಬಲ್ ಸ್ಪೆಷಲ್ ಪೋಷಕಾಂಶಗಳ ಪ್ಯಾಕೆಟ್ ಅನ್ನು ವಿತರಿಸಲಾಯಿತು.
ಕುರುಬೂರು ಕೃಷಿ ವಿಶ್ವ ವಿದ್ಯಾಲಯದ ಡಾ.ಸ್ವಾತಿ, ಶ್ರೀ ಗಂಗಾಭವಾನಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವಿಜಯ ಬಾವರೆಡ್ಡಿ, ಉಪಾಧ್ಯಕ್ಷ ಆಂಜನೇಯರೆಡ್ಡಿ, ನಿರ್ದೇಶಕರಾದ ಬಶೆಟ್ಟಹಳ್ಳಿಯ ಮಂಜುನಾಥ್, ಬಿ.ಎನ್.ವೆಂಕಟೇಶ್, ಬಿ.ರವಿಕುಮಾರ್, ಜಿ.ಆನೆಮಡಗು ಶಿವಣ್ಣ, ವಲಸೇನಹಳ್ಳಿ ವೆಂಕಟೇಶ್, ಅರುಣಕುಮಾರ್.ಟಿ.ಕೆ, ಲಕ್ಕೇನಹಳ್ಳಿ ವೆಂಕಟೇಶ್, ಸಿಇಓ ಅರುಣ ಜೋತಿ, ಡಿಇಓ ನಾಗಶ್ರೀ, ಎಡಿಎಚ್ ಪ್ರಿಯಾಂಕಾ, ಷೇರುದಾರ ರೈತರು ಹಾಜರಿದ್ದರು.