Sidlaghatta : ಬೆಂಗಳೂರು ನಗರ ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಘಟಕದಿಂದ ಹಮ್ಮಿಕೊಂಡಿರುವ ಏಳು ದಿನಗಳ “ರಾಷ್ಟ್ರೀಯ ಭಾವೈಕ್ಯತಾ ಶಿಬಿರ”ದಲ್ಲಿ ಭಾಗವಹಿಸಿರುವ ನಾನಾ ರಾಜ್ಯಗಳ ವಿದ್ಯಾರ್ಥಿಗಳ ತಂಡ ಅಧ್ಯಯನ ಪ್ರವಾಸಕ್ಕಾಗಿ ಶಿಡ್ಲಘಟ್ಟಕ್ಕೆ ಸೋಮವಾರ ಆಗಮಿಸಿತ್ತು.
ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರದ ವಿವಿಧ ಕಾಲೇಜುಗಳ ಎನ್.ಎಸ್.ಎಸ್ ಘಟಕದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವು ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆ, ಹಿತ್ತಲಹಳ್ಳಿಯ ಗೋಪಾಲಗೌಡರ ರೇಷ್ಮೆ ಹುಳು ಸಾಕಣೆ ಮನೆ, ಚಂದ್ರಿಕೆ ಶೆಡ್, ಹಿಪ್ಪುನೇರಳೆ ತೋಟ, ಮಿಶ್ರ ಬೆಳೆಗಳ ತೋಟಕ್ಕೆ ಭೇಟಿ ನೀಡಿದ್ದರು.
ರೇಷ್ಮೆಗೂಡು ಮಾರುಕಟ್ಟೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಅವರು ಮಾರುಕಟ್ಟೆಯಲ್ಲಿ ನಡೆಯುವ ರೇಷ್ಮೆಗೂಡಿನ ವಹಿವಾಟು, ಇ-ಹರಾಜು ಪ್ರಕ್ರಿಯೆ, ರೀಲರುಗಳು ಬಿಡ್ ಮಾಡುವ ಬಗೆ, ರೈತರ ಬ್ಯಾಂಕ್ ಖಾತೆಗೆ ರೇಷ್ಮೆಗೂಡು ಹಣ ಜಮೆಯಾಗುವ ಬಗ್ಗೆ ವಿವರಿಸಿದರು.
ದೇಶದಲ್ಲೆ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಮಾರುಕಟ್ಟೆ ಇದಾಗಿದ್ದು ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಡೆಯುವ ವಾರ್ಷಿಕ ವಹಿವಾಟು, ರೇಷ್ಮೆಗೂಡಿನ ಆವಕ, ಸರ್ಕಾರಕ್ಕೆ ಕಮೀಷನ್ ರೂಪದಲ್ಲಿ ಸಂದಾಯವಾಗುವ ವರಮಾನ ಇನ್ನಿತರೆ ವಿಷಯಗಳ ಬಗ್ಗೆ ತಿಳಿಸಿದರು.
ಮಾರುಕಟ್ಟೆ ಆವರಣದಲ್ಲಿರುವ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕರ ಕಂಪನಿಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಕಂಪನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರು, ಕಂಪನಿಯ ವ್ಯಾಪಾರ ವಹಿವಾಟು, ರೈತರ ಪಾತ್ರ ಹಾಗೂ ಮಾರುಕಟ್ಟೆಯ ನೀತಿ ನಿಯಮಗಳ ಬಗ್ಗೆ ವಿವರಿಸಿದರು.
ನಂತರ ವಿದ್ಯಾರ್ಥಿಗಳ ತಂಡವು ಹಿತ್ತಲಹಳ್ಳಿಯ ರೈತ ಗೋಪಾಲಗೌಡರ ತೋಟಕ್ಕೆ ಭೇಟಿ ನೀಡಿತು. ರೇಷ್ಮೆ ಹುಳು ಸಾಕಣೆ ಮನೆ, ಚಂದ್ರಿಕೆ ಶೆಡ್, ಹಿಪ್ಪುನೇರಳೆ ತೋಟ, ಮಿಶ್ರ ಬೆಳೆಗಳ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಗೋಪಾಲಗೌಡ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಪ್ರಸ್ತುತ ಕೃಷಿ, ಹೈನುಗಾರಿಕೆ ಕ್ಷೇತ್ರದ ಸ್ಥಿತಿ ಗತಿ ಕುರಿತು ವಿವರಿಸಿದರು. ವೈಜ್ಞಾನಿಕವಾಗಿ, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆದಿದ್ದೇ ಆದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದಲ್ಲಿ ಲಾಭ ಇರಲಿದೆ ಎಂದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ, ಕೃಷಿಯಲ್ಲಿ ತೊಡಗಿಸುವ ಬಂಡವಾಳ ಪ್ರಮಾಣ ಹೆಚ್ಚಿರುವುದು, ಸಾಕಷ್ಟು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು, ಮಾರ್ಗದರ್ಶನ ಕೊರತೆಯಿಂದ ಬೆಳೆ ಬೆಳೆಯುವಂತ ಹತ್ತು ಹಲವು ಸಮಸ್ಯೆಗಳಿಂದ ಕೃಷಿ ನಷ್ಟದ ಕಸುಬಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಶಿಬಿರದ ನಿರ್ದೇಶಕ ಡಾ.ಎಚ್.ಜಿ.ಗೋವಿಂದೇಗೌಡ, ಶಿಬಿರಾಧಿಕಾರಿ ಕೇಶವಾರ ನವೀನ್ ಕುಮಾರ್, ಪ್ರೊ.ಉಮಾದೇವಿ, ಪ್ರೊ.ಅಡಿವೆಪ್ಪ ಹಾಜರಿದ್ದರು.