Sidlaghatta : ಶಿಡ್ಲಘಟ್ಟ ನಗರದ ಸ್ತ್ರೀಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ (Health Department), ಪೋಲಿಸ್ (Police) ಇಲಾಖೆ ಮತ್ತು ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ಪೌಷ್ಠಿಕ ಆಹಾರ ಸಪ್ತಾಹ” ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್ ಶಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಆರೋಗ್ಯ ರಕ್ಷಣೆಯಲ್ಲಿ ಪೌಷ್ಟಿಕ ಆಹಾರವು ಹೆಚ್ಚಿನ ಮಹತ್ವ ಹೊಂದಿದೆ. ಜನರು ಆರೋಗ್ಯದ ಅಭಿವೃದ್ಧಿಗೆ ಪೂರಕವಾದ ಆಹಾರ ಪದಾರ್ಥಗಳನ್ನು ಸೇವಿಸದ ಪರಿಣಾಮ ಅನಾರೋಗ್ಯ ಪೀಡಿತರಾಗಬೇಕಾಗಿದೆ. ಶಿಕ್ಷ ಕರು, ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಿ ಜ್ಞಾನ ಮೂಡಿಸಬೇಕು” ಎಂದು ಹೇಳಿ, ಪೌಷ್ಠಿಕ ಆಹಾರ ವಿಷಯಗಳ ಬಗ್ಗೆ ಅವರು ವಿವರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದಿಂದ ಇದ್ದರೆ ಮಾತ್ರ ನವ ಭಾರತ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆರು ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ, ಮಕ್ಕಳಿಗೆ ತಿಳಿಸಬೇಕು ಎಂದರು.
ಅಪೌಷ್ಟಿಕತೆಯಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಗಮನ ಹರಿಸಬೇಕು. ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.ನೇರಳೆ ಹಣ್ಣು, ಪಪ್ಪಾಯ, ಬಾಳೆ ಹಣ್ಣು ಸೇರಿದಂತೆ ದೇಹಕ್ಕೆ ಶಕ್ತಿ ನೀಡುವ ಹಣ್ಣುಗಳ ಸೇವನೆ ಅಗತ್ಯ. ಬೇಯಿಸದ ಹಸಿ ತರಕಾರಿಗಳನ್ನು ತಿನ್ನುವುದು ಉತ್ತಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ತ್ರೀಶಕ್ತಿ ಭವನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಿಡವನ್ನು ನೆಡಲಾಯಿತು.
ಸಿ ಡಿ ಪಿ ಓ ವಿದ್ಯಾ ವಸ್ತ್ರದ್, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಪ್ಯಾನಲ್ ವಕೀಲೆ ಕೆ.ಎಂ.ನಾಗಮಣಿ, ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.