Sidlaghatta : ಶಿಡ್ಲಘಟ್ಟ ನಗರದ ಹಿರಿಯ ಸಿವಿಲ್ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಅಪರ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಅವರು ಈ ಬಗ್ಗೆ ಮಾತನಾಡಿ, “ಈ ದಿನದ ಪ್ರಮುಖವಾದ ಪ್ರಕರಣವೆಂದರೆ, ದಂಪತಿ ನಡುವೆ ರಾಜಿ ಮಾಡಿಸಿದ್ದಾಗಿದೆ. ಸುಮಾರು ಏಳು ವರ್ಷಗಳಿಂದ ಸವಿತ ಮತ್ತು ಸೋಮ ಅವರ ನಡುವೆ ನಡೆಯುತ್ತಿದ್ದ ಈ ಜೀವನಾಂಶದ ವ್ಯಾಜ್ಯದಲ್ಲಿ ಗಂಡ ಹೆಂಡತಿ ಸ್ವ ಇಚ್ಛೆಯಿಂದ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದು ಅತ್ಯಂತ ಸಂತೋಷದ ಸಂಗತಿಯಾಗಿದೆ. ರಾಜಿ ಮೂಲಕ ನೆಮ್ಮದಿ, ಸಂತೋಷ, ಪರಿಹಾರ ಪಡೆಯಲು ಸಾಧ್ಯ ಎನ್ನುವುದಕ್ಕೆ ಈ ಗಂಡ ಹೆಂಡತಿ ಉದಾಹರಣೆಯಾಗಿದ್ದಾರೆ” ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 278 ಪ್ರಕರಣಗಳಲ್ಲಿ 166 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಇವುಗಳಿಂದ 11,87,480 ರೂ ಹಣ ಸಂಧಾಯವಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 176 ಪ್ರಕರಣಗಳ ಪೈಕಿ 114 ಪ್ರಕರಣಗಳು ತೀರ್ಮಾನವಾಗಿ, 37,96,641 ರೂ ಸಂಧಾಯವಾಗಿದೆ. ಅಪರ ಸಿವಿಲ್ ನ್ಯಾಯಾಲಯದಲ್ಲಿ 95 ಪ್ರಕರಣಗಳ ಪೈಕಿ 58 ಪ್ರಕರಣಗಳು ತೀರ್ಮಾನವಾಗಿ, 75,200 ರೂ ಸಂಧಾಯವಾಗಿದೆ. ಒಟ್ಟಾರೆ ಶಿಡ್ಲಘಟ್ಟ ನ್ಯಾಯಾಲಯದಲ್ಲಿ 345 ಪ್ರಕರಣಗಳು ಇತ್ಯರ್ಥಗೊಂಡು, 52,87,921 ರೂ ಸಂಧಾಯವಾಗಿದೆ.
ಸಂಧಾನಕಾರರಾಗಿ ವಕೀಲ ಡಿ.ಸತ್ಯನಾರಾಯಣ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಗೂ ಹಿರಿಯ ವಕೀಲರು ಹಾಜರಿದ್ದರು.