
Sidlaghatta : ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಹೀನ ಕೃತ್ಯವನ್ನು ಖಂಡಿಸಿ ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಮುಸ್ಲಿಂ ಸಮುದಾಯದವರು ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರರು ಹುತಾತ್ಮರಾದವರ ಸ್ಮರಣಾರ್ಥವಾಗಿ ಮೇಣದ ಬತ್ತಿ ಬೆಳಗಿ ಮೌನ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮಹಬೂಬ್ ಖಾನ್ ಅವರು, “ಪಾಕ್ ಪ್ರೇರಿತ ಉಗ್ರರು ಭಾರತೀಯರನ್ನು ಕೊಂದಿರುವುದು ಅವರ ಪೈಶಾಚಿಕ ಮನೋಭಾವವನ್ನು ತೋರಿಸುತ್ತದೆ. ನಾವು ಎಲ್ಲರೂ ಜಾತಿ, ಧರ್ಮ, ಭಾಷೆ ಮೀರಿ ಇದನ್ನು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಹೇಳಿದರು.
“ಈ ರೀತಿ ಅಮಾನವೀಯ ಕೃತ್ಯಗಳು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆ ನಡೆಯಬಾರದು. ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ,” ಎಂದರು.
ಭಾರತವನ್ನು ಎಲ್ಲಾ ಧರ್ಮಗಳೂ ಸಹಭಾವದಿಂದ ಬದುಕುವ ಒಂದು ಹೂತೋಟಕ್ಕೆ ಹೋಲಿಸಿದ ಅವರು, “ನಮ್ಮ ಒಗ್ಗಟ್ಟಿನ ಸಮಾಜದಲ್ಲಿ ವಿಷ ಹರಡಲು ಯತ್ನಿಸುವ ಪಾಕ್ ಪ್ರೇರಿತ ಉಗ್ರರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಬೇಕು,” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಾಕಿಸ್ತಾನದ ವಿರುದ್ಧ ಹಾಗೂ ಉಗ್ರರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಸದ್ದಾಂಪಾಷ, ಮೊಹಮ್ಮದ್ ರಿಯಾಜ್, ಮುಬಾರಕ್, ರಿಯಾಜ್, ಮುನೀರ್, ಸಾದಿಕ್, ಸಯೀದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.