ಶಿಡ್ಲಘಟ್ಟ ನಗರದ ವೃದ್ದ ದಂಪತಿಗಳ ಜೋಡಿ ಕೊಲೆಯ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚುವುದು ಹಾಗೂ ಭಯಭೀತರಾಗಿರುವ ನಗರದ ಜನತೆಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಆರ‍್ಯ ವೈಶ್ಯ ಮಂಡಳಿ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಮಂಗಳವಾರ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.
ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ವಾಸಿಸುತ್ತಿದ್ದ ಡಿ.ವಿ.ಶ್ರೀನಿವಾಸಲು ದಂಪತಿಯನ್ನು ಕಳೆದ ಬುಧವಾರ ರಾತ್ರಿ ಕೊಲೆ ಮಾಡಲಾಗಿತ್ತು. ನಗರದಲ್ಲಿ ಜೋಡಿ ಕೊಲೆ ನಡೆದು ವಾರವಾಗುತ್ತಾ ಬಂದರೂ ಈವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಇದರಿಂದ ಸುತ್ತಮುತ್ತಲ ಜನರಷ್ಟೇ ಅಲ್ಲದೇ ನಗರದ ಎಲ್ಲಾ ವರ್ಗದ ಜನರೂ ಭಯಭೀತರಾಗಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವ ಜೊತೆಗೆ ನಗರದಾದ್ಯಂತ ಮತ್ತಷ್ಟು ಬೀದಿ ದ್ವೀಪಗಳನ್ನು ಹಾಕಿಸುವುದು ಹಾಗೂ ಸಿಸಿ ಕೆಮೆರಾಗಳನ್ನು ಅಳವಡಿಸುವ ಜೊತೆಗೆ ರಾತ್ರಿಯ ವೇಳೆ ನಗರದಾದ್ಯಂತ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಬೇಕು. ರಾತ್ರಿಯ ವೇಳೆ ಬೀದಿ ದೀಪಗಳನ್ನು ಯಾವುದೇ ಕಾರಣಕ್ಕೂ ಆರಿಸದಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭಲ್ಲಿ ಆರ‍್ಯ ವೈಶ್ಯ ಮಂಡಳಿ ಅಧ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ, ಕಾರ್ಯದರ್ಶಿ ನಾರಾಯಣಮೂರ್ತಿ, ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್, ಮುಖಂಡರಾದ ಡಾ.ಡಿ.ಟಿ.ಸತ್ಯನಾರಾಯಣ ರಾವ್, ಬಿ.ಸಿ.ನಂದೀಶ್, ಕನ್ನಡ ಪರ ಸಂಘಟನೆಯ ರಾಮಾಂಜಿ ಹಾಜರಿದ್ದರು.