Sidlaghatta : ಶಿಡ್ಲಘಟ್ಟ ನಗರಸಭೆ (Municipality) ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ದೂರಿನ ಮೇರೆಗೆ ಕಾಂಗ್ರೆಸ್‌ನ ಏಳು ಮಂದಿ ಸದಸ್ಯರಿಗೆ ಜಿಲ್ಲಾಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭಾ ಸದಸ್ಯ ಎಂ.ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಸದಸ್ಯರಾದ ಎಸ್.ಚಿತ್ರಮನೋಹರ್, ಎಸ್.ಎಂ.ಮಂಜುನಾಥ್, ಅನಿಲ್ ಕುಮಾರ್, ಎನ್.ಕೃಷ್ಣಮೂರ್ತಿ, ಟಿ.ಮಂಜುನಾಥ್, ಜಬೀವುಲ್ಲಾ ಹಾಗೂ ಶಿವಮ್ಮಮುನಿರಾಜು ಅವರಿಗೆ ಪಕ್ಷದ ವಿಪ್ ಉಲ್ಲಂಘನೆ ಮಾಡಿರುವ ಬಗ್ಗೆ ವಿಚಾರಣೆಗೆ ಹಾಜರಾಗಲು ಜಿಲ್ಲಾಧಿಕಾರಿ ಅವರು ನೊಟೀಸ್ ಜಾರಿ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ 5 ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ 13, ಜೆಡಿಎಸ್‌ನ 10, ಬಿಜೆಪಿ ಹಾಗೂ ಬಿಎಸ್‌ಪಿ ಪಕ್ಷದ ತಲಾ 2 ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳು 4 ಮಂದಿ ಸದಸ್ಯರಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಿದ್ದರೂ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ಸಿಗರು ವಿಫಲರಾಗಿದ್ದರು. ಜೆಡಿಎಸ್ ನ ವೆಂಕಟಸ್ವಾಮಿ, ರೂಪ ನವೀನ್ ಆಯ್ಕೆ ಆಗಿದ್ದರು.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭಾ ಸದಸ್ಯ ಎಂ.ಶ್ರೀನಿವಾಸ್ ಅವರು ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ದ ಕ್ರಮ ತೆಗೆದುಕೊಳ್ಳಲು ದೂರು ನೀಡಿದ ಹಿನ್ನಲೆಯಲ್ಲಿ 7 ಮಂದಿ ಕಾಂಗ್ರೆಸ್‌ನ ಸದಸ್ಯರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಈ ತಿಂಗಳ 30 ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆಯುವ ವಿಚಾರಣೆಗೆ ಖುದ್ದು ಅಥವಾ ವಕೀಲರ ಮೂಲಕ ಅಗತ್ಯ ದಾಖಲಾತಿ, ಸಾಕ್ಷಾಧಾರಗಳೊಂದಿಗೆ ಹಾಜರಾಗವುದು ತಪ್ಪಿದಲ್ಲಿ ನಿಮ್ಮ ಹೇಳಿಕೆ ಇಲ್ಲವೆಂದು ಪರಿಗಣಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.