ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ರಘುನಂದನ್ ಅವರು ನಗರಸಭೆಯ ಅಧ್ಯಕ್ಷರಾಗಿ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷರಾಗಿ ಅಫ್ಸರ್ ಪಾಷ ಅವರ ಆಯ್ಕೆಯನ್ನು ಅಧಿಕೃತವಾಗಿ ಸೋಮವಾರ ಘೋಷಿಸಿದರು.
ಕಳೆದ ವರ್ಷ ಅಕ್ಟೋಬರ್ 31 ರಂದು ನಗರಸಭೆಯ ಅಧ್ಯಕ್ಷ ಮತ್ತು ಉಪಧ್ಯಕ್ಷರ ಚುನಾವಣೆ ನಡೆದಿತ್ತು. ಆದರೆ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ. ಇದೀಗ ಉಚ್ಚ ನ್ಯಾಯಾಲಯದಿಂದ ಫಲಿತಾಂಶವನ್ನು ಪ್ರಕಟಿಸುವಂತೆ ನಿರ್ದೇಶನ ಬಂದಿರುವುದರಿಂದ ಈ ದಿನ ಪ್ರಕಟಿಸುತ್ತಿದ್ದೇವೆ ಎಂದು ಉಪವಿಭಾಗಾಧಿಕಾರಿ ರಘುನಂದನ್ ತಿಳಿಸಿದರು.
ಕಳೆದ ಅಕ್ಟೋಬರ್ 31 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ರಮೇಶ್ ಮತ್ತು ಕೃಷ್ಣಮೂರ್ತಿ ಸ್ಪರ್ಧಿಸಿದ್ದರು. ಕೃಷ್ಣಮೂರ್ತಿ ಅವರು 14 ಮತಗಳು ಪಡೆದಿದ್ದರೆ, ಸುಮಿತ್ರಾ ರಮೇಶ್ ಅವರು 17 ಮತಗಳನ್ನು ಪಡೆದು ವಿಜೇತರಾಗಿದ್ದರು. ಉಪಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಫ್ಸರ್ ಪಾಷ ಮತ್ತು ಎಸ್.ಎಂ.ಮಂಜುನಾಥ್ ಸ್ಪರ್ಧಿಸಿದ್ದರು. ಎಸ್.ಎಂ.ಮಂಜುನಾಥ್ ಅವರು 14 ಮತಗಳು ಪಡೆದಿದ್ದರೆ, ಅಫ್ಸರ್ ಪಾಷ ಅವರು 17 ಮತಗಳನ್ನು ಪಡೆದು ವಿಜೇತರಾಗಿದ್ದರು.
“ಕೊರೊನಾ ಬಾಧಿತವಾದ ಈ ಸಂದರ್ಭದಲ್ಲಿ ಎಲ್ಲಾ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಒಗ್ಗೂಡಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸೋಣ. ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸೋಣ. ನಗರ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಎಲ್ಲಾ ಸದಸ್ಯರೂ ಕೈಜೋಡಿಸುವಂತೆ” ನೂತನ ಅಧ್ಯಕ್ಷೆ ಸುಮಿತ್ರಾ ರಮೇಶ್ ಮತ್ತು ಉಪಾಧ್ಯಕ್ಷ ಅಫ್ಸರ್ ಪಾಷ ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್, ನಗರಸಭಾ ಸದಸ್ಯರು, ಸಿಬ್ಬಂದಿ ಹಾಜರಿದ್ದರು.