Sidlaghatta : ಶಿಡ್ಲಘಟ್ಟ ನಗರದಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಬೀದಿ ದೀಪಗಳ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದಾಗಿ ನೂತನ ನಗರಸಭೆ ಅಧ್ಯಕ್ಷ ಎಂ. ವಿ. ವೆಂಕಟಸ್ವಾಮಿ ಮತ್ತು ಉಪಾಧ್ಯಕ್ಷೆ ರೂಪ ನವೀನ್ ತಿಳಿಸಿದರು.
ನಗರಸಭೆಯಲ್ಲಿ ಶುಕ್ರವಾರ ಈಚೆಗಷ್ಟೇ ನಡೆದ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಎಂ. ವಿ. ವೆಂಕಟಸ್ವಾಮಿ ಮತ್ತು ರೂಪ ನವೀನ್ ಅವರು ಪದಗ್ರಹಣ ಹಾಗೂ ಅಧಿಕಾರ ಸ್ವೀಕಾರ ಕಾರ್ಯಕ್ರಮದ ನಂತರ ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತರಾಗಿದ್ದವರನ್ನು ಈ ಬಾರಿ ಶಾಸಕರು, ಸಂಸದರು ಹಾಗೂ ಸದಸ್ಯರು ಬೆಂಬಲಿಸಿ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವರು. ಎಲ್ಲರ ನಂಬಿಕೆಯನ್ನೂ ಉಳಿಸಿಕೊಳ್ಳುತ್ತೇವೆ. ಜನರು ಕೇಳುವ ಮೂಲಭೂತ ಸೌಲಭ್ಯಗಳನ್ನು ಕೊಡುವುದಕ್ಕೆ ಪ್ರಾಮುಖ್ಯತೆ ನೀಡುತ್ತೇವೆ. ಸರ್ಕಾರದಿಂದ ಬರುವ ಅನುದಾನವನ್ನು ಎಲ್ಲಾ ಸದಸ್ಯರ ಸಹಮತದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು. ಎಲ್ಲಾ ಸದಸ್ಯರನ್ನೂ ಜೊತೆಗೂಡಿಸಿಕೊಂಡು ನಗರದ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು.
ನಗರದ ಪ್ರಥಮ ಪ್ರಜೆಯಾಗಿ ನನ್ನ ಕಾರ್ಯಾವಧಿಯಲ್ಲಿ ಯಾವುದೇ ತಾರತಮ್ಯ ಮಾಡದೆ ಅಭಿವೃದ್ಧಿಗಾಗಿ ಶ್ರಮಿಸುವೆ. ನಗರದ ಸ್ವಚ್ಛತೆಗೆ ಹಾಗೂ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ಎಂ. ವಿ. ವೆಂಕಟಸ್ವಾಮಿ ನುಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್, ಸದಸ್ಯರು, ಅಧಿಕಾರಿಗಳು, ಜೆಡಿಎಸ್ ಮುಖಂಡರು, ಅಭಿಮಾನಿಗಳು ನಗರಸಭೆ ಅಧ್ಯಕ್ಷ ಎಂ. ವಿ. ವೆಂಕಟಸ್ವಾಮಿ ಮತ್ತು ಉಪಾಧ್ಯಕ್ಷೆ ರೂಪ ನವೀನ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.