ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ನಗರಸಭೆ ಸಮುದಾಯ ಭವನದಲ್ಲಿ ಶನಿವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಾಂಸದ ಅಂಗಡಿಗಳ ಮಾಲೀಕರ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಮಾತನಾಡಿದರು.
ಈ ಹಿಂದೆ ಹಲವಾರು ಭಾರಿ ದನದ ಮಾಂಸ ಮಾರದಂತೆ ಸೂಚನೆ ನೀಡಿತ್ತಾದರೂ ನಗರದಾದ್ಯಂತ ಅನಧಿಕೃತವಾಗಿ ತಲೆಯೆತ್ತಿರುವ 14 ಅಂಗಡಿಗಳು ದನದ ಮಾಂಸ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಸೋಮವಾರದಿಂದ ಈ ದನದ ಮಾಂಸದ ಅಂಗಡಿಗಳು ಮುಚ್ಚಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇನ್ನು ಕುರಿ ಕೋಳಿ ಮಾಂಸ ಮಾರಾಟ ಮಾಡುವ ಅಂಗಡಿಗಳವರು ತಮ್ಮ ತಮ್ಮ ಅಂಗಡಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ನಗರಸಭೆಯಿಂದ ಪರವಾನಗಿಯನ್ನು ಪಡೆದುಕೊಳ್ಳಬೇಕು. ಎಲ್ಲೆಂದರಲ್ಲಿ ಮಾಂಸದ ತ್ಯಾಜ್ಯವನ್ನು ಎಸೆಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಬೀದಿ ನಾಯಿಗಳ ಧಾಳಿಯಿಂದ ಬಾಲಕನೋರ್ವ ಮೃತಪಟ್ಟಿರುವುದು ನಾವೆಲ್ಲಾ ತಲೆ ತಗ್ಗಿಸುವುಂತಾಗಿದೆ. ಮಾಂಸದ ಅಂಗಡಿ ತ್ಯಾಜ್ಯವನ್ನು ಕಡ್ಡಾಯವಾಗಿ ನಗರಸಭೆಯ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಹಾಕಬೇಕು. ಕಸ ವಿಲೇವಾರಿ ಮಾಡುವುದಕ್ಕೆ ನಗರಸಭೆಯಿಂದ ನಿಗಧಿ ಮಾಡಿದ ಶುಲ್ಕವನ್ನು ಅಂಗಡಿಗಳವರೇ ಭರಿಸಬೇಕು ಎಂದರು.
ಇನ್ನು ನಗರದ ಬಹುತೇಕ ಮಾಂಸದ ಅಂಗಡಿಗಳವರು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದು, ಇದರಿಂದ ನಗರದ ಸ್ವಚ್ಚತೆ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಪ್ಲಾಸ್ಟಿಕ್ ಕವರ್ ಬಳಸುವ ಅಂಗಡಿಗಳವರಿಗೆ ಯಾವುದೇ ಮುಲಾಜಿಲ್ಲದೇ ದಂಡ ವಿಧಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಫ್ಸರ್‌ಪಾಷ, ಸದಸ್ಯರಾದ ರಾಘವೇಂದ್ರ, ಮಂಜುನಾಥ್, ಮುಖಂಡರಾದ ಎಸ್.ಎಂ.ರಮೇಶ್, ಆರೋಗ್ಯ ನಿರೀಕ್ಷಕ ವಿಜಯ್‌ಕುಮಾರ್, ಮಾಂಸದ ಅಂಗಡಿಗಳ ವ್ಯಾಪಾರಿಗಳಾದ ವಿಜಯ್, ನಾಗೇಶ್, ಬಾಬಾ, ಫಕ್ರುದ್ದೀನ್, ಅಮೀರ್ ಹಾಜರಿದ್ದರು.