Sidlaghatta : ಅಪಾಯಕಾರಿಯಾದ ಆಸ್ಪತ್ರೆ ತ್ಯಾಜ್ಯವನ್ನು ಪದೇ ಪದೇ ನಗರದ ಗೌಡನಕೆರೆಗೆ ಸುರಿಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದ್ದರೂ ಸಹ ಮತ್ತದೇ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಮಂಜುನಾಥ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಗೌಡನಕೆರೆಯಲ್ಲಿ ನಗರದ ಕಸ ಹಾಕುವುದು ಸೇರಿದಂತೆ ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಬಹುತೇಕ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆದರೂ ಕೆಲವರು ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಇನ್ನುಮುಂದೆ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ನಗರದ ಜನತೆಗೆ ಅಗತ್ಯ ಮೂಲಭೂತ ಸವಲತ್ತುಗಳಾದ ಕುಡಿಯುವ ನೀರು, ಬೀದಿ ದ್ವೀಪ ಸೇರಿದಂತೆ ಸ್ವಚ್ಚತೆ ಕಾಪಾಡಲು ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.
ಸೋಮವಾರ ಸಂತೆಯ ಶುಚಿತ್ವದ ಬಗ್ಗೆ ಮಾತನಾಡಿ, ನಗರಸಭೆ ಪೌರಾಯುಕ್ತರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಖುದ್ದು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸೋಣ. ತಿನ್ನುವ ಪದಾರ್ಥಗಳನ್ನು ಮಾರುವ ಸ್ಥಳ ಸ್ವಚ್ಛವಾಗಿರಬೇಕು. ಮಾರುವವರಿಗೆ ಮತ್ತು ಕೊಳ್ಳುವವರಿಗೆ ಅನುಕೂಲವಾಗಿರಬೇಕು ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭೆಗೆ ಸೇರಿದ ವಾಹನಗಳ ನೋಂದಣಿ ಮಾಡಿಸುವುದು ಸೇರಿದಂತೆ ಚರಾಸ್ತಿ ಹಾಗು ಸ್ಥಿರಾಸ್ತಿಗಳ ಉಳಿವಿಗೆ ಅಗತ್ಯ ಕ್ರಮ ಜರುಗಿಸಬೇಕು. ನಗರದಲ್ಲಿ ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಬಹಳಷ್ಟು ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ.
ಇದಕ್ಕೆ ಅನುಮತಿ ನೀಡಿದವರಾರು, ಒಂದು ವೇಳೆ ಯಾವುದೇ ಅನುಮತಿ ಪಡೆಯದೇ ನಿರ್ಮಾಣ ಮಾಡುತ್ತಿರುವ ಕಟ್ಟಡಗಳ ಮಾಲೀಕರಿಂದ ತೆರಿಗೆ ಹೇಗೆ ಸಂಗ್ರಹಿಸುತ್ತಿದ್ದೀರಿ, ತೆರಿಗೆ ಸಂಗ್ರಹ ಮಾಡುತ್ತಿರುವ ನೀವುಗಳು ಅದಕ್ಕೆ ಪರವಾನಗಿ ನೀಡಿ ನಗರಸಭೆಗೆ ಬರಬೇಕಾದ ಶುಲ್ಕ ಸಂಗ್ರಹಿಸಿ. ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಅಗತ್ಯ ಕ್ರಮ ಜರುಗಿಸಿ.
ನಗರದ 22 ನೇ ವಾರ್ಡಿನ ಬಸವೇಶ್ವರ ದೇವಾಲಯದ ಆವರಣದಲ್ಲಿ ಗಿಡ ಗಂಟೆಗಳು ಬೆಳೆದಿದ್ದು ಹಾವುಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲ ಮನೆಗಳಿಗೆ ಹಾವುಗಳು ನುಗ್ಗುವುದರಿಂದ ಜನ ಭಯ ಭೀತರಾಗಿದ್ದಾರೆ ಹಾಗಾಗಿ ಸಂಬಂಧಪಟ್ಟವರಿಗೆ ದೇವಾಲಯ ಆವರಣ ಸ್ವಚ್ಚಗೊಳಿಸುವಂತೆ ನೋಟಿಸ್ ಜಾರಿ ಮಾಡುವುದರ ಬಗ್ಗೆ ಸದಸ್ಯರು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪ ನವೀನ್, ಪೌರಾಯುಕ್ತ ಮಂಜುನಾಥ್, ಸೇರಿದಂತೆ ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.