Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ಬಳಿ ಇರುವ ಶಿಡ್ಲಘಟ್ಟ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸದ ರಾಶಿಗೆ ಗುರುವಾರ ಬೆಂಕಿ ಬಿದ್ದಿದ್ದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ.
ನಗರದಲ್ಲಿ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದಾಸ್ತಾನು ಮಾಡಿದ್ದ ಕಸದ ರಾಶಿಯಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದ್ದು ಅಲ್ಲಿನ ಕಾವಲುಗಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಗೆ ವಿಷಯ ಮುಟ್ಟಿಸಿದ್ದಾನೆ.
ಶಿಡ್ಲಘಟ್ಟದಿಂದ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದಲೂ ತಲಾ ಒಂದು ಅಗ್ನಿಶಾಮಕ ವಾಹನ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಠಾಣೆಯ 8ಕ್ಕೂ ಹೆಚ್ಚು ಸಿಬ್ಬಂದಿ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕಸದ ರಾಶಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ ಆಗಮಿಸಿದ್ದ ವಾಹನ 16 ಸಾವಿರ ಲೀಟರ್ ಸಾಮರ್ಥ್ಯದ್ದಾಗಿದ್ದರೆ, ಶಿಡ್ಲಘಟ್ಟದ್ದು 4.5 ಸಾವಿರ ಲೀಟರ್ ನೀರಿನ ಸಾಮರ್ಥ್ಯದ್ದು. ಎರಡೂ ವಾಹನಗಳೂ ಸುಸ್ಥಿತಿಯಲ್ಲಿ ಇರದ ಕಾರಣ ಬೆಂಕಿ ನಂದಿಸಲು ಸಿಬ್ಬಂದಿ ಪರದಾಡುವಂತಾಯಿತು.
ಅಗ್ನಿಶಾಮಕ ಠಾಣಾಕಾರಿ ಕದಿರಪ್ಪ, ಸಿಬ್ಬಂದಿ ಮುನಿಕೃಷ್ಣ, ಸಂದೀಪ್, ಅಶೋಕ್, ಸುರೇಶ್, ಉಮೇಶ್, ಚಿಕ್ಕಬಳ್ಳಾಪುರ ಠಾಣೆಯ ಅಸ್ಲಾಂ, ಉಲ್ಲಪ್ಪಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.