Sidlaghatta ನಗರದ 11 ಮತ್ತು 22 ನೇ ವಾರ್ಡ್ ನ ನಾಗರಿಕರು ಅಬಕಾರಿ ಆಯುಕ್ತರಿಗೆ, ನಿರೀಕ್ಷಕರಿಗೆ ಮತ್ತು ಉಪನಿರೀಕ್ಷಕರಿಗೆ ಅಶೋಕ ರಸ್ತೆಯಲ್ಲಿ ಎಂ.ಎಸ್.ಐ.ಎಲ್ ನ ಮದ್ಯ ಮಳಿಗೆ ಸ್ಥಾಪನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಈ ಪ್ರದೇಶದವರೆಲ್ಲರ ಸಹಿ ಇರುವ ಪತ್ರವನ್ನು ನೀಡಿದ್ದಾರೆ.
ನಗರದ 11 ಮತ್ತು 22 ನೇ ವಾರ್ಡ್ ಸೇರುವ ಅಶೋಕ ರಸ್ತೆಯ ಪ್ರದೇಶದಲ್ಲಿ MSIL ನ ಮದ್ಯ ಮಳಿಗೆ ಸ್ಥಾಪಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಈ ಪ್ರದೇಶದ ನಾಗರಿಕರ ವಿರೋಧವಿದೆ. ಈ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳಿದ್ದು, ವಿವಿಧ ಶಾಲಾ ಕಾಲೇಜುಗಳ ಬಸ್ಸುಗಳನ್ನು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ಇಲ್ಲಿ ಶಾಲಾ ವಾಹನಗಳನ್ನು ನಿಲ್ಲಿಸಲಾಗುತ್ತದೆ.
ಈ ಪ್ರದೇಶವು ಊರಿನ ಅತ್ಯಂತ ಹಳೆಯ ಸ್ಥಳವಾಗಿದ್ದು, ಇಲ್ಲಿ ಸುತ್ತಮುತ್ತ ಪುರಾತನ ದೇವಾಲಯಗಳಿವೆ. ಪೂರ್ವದಲ್ಲಿ ಅಭಯ ಆಂಜನೇಯಸ್ವಾಮಿ ದೇವಾಲಯ, ಪಶ್ಚಿಮದಲ್ಲಿ ಕಾಶಿ ವಿಶ್ವೇಶ್ವರ, ಅಯ್ಯಪ್ಪಸ್ವಾಮಿ ಮತ್ತು ನವಗ್ರಹ ದೇವಾಲಯಗಳಿವೆ,
ದಕ್ಷಿಣದಲ್ಲಿ ಪ್ರಸಿದ್ಧ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ, ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಅಶ್ವತ್ಥಕಟ್ಟೆಗಳಿವೆ. ಸುಮಾರು ನಾನ್ನೂರು ವರ್ಷಗಳಷ್ಟು ಹಳೆಯದಾದ ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಿರುವ ಶಾಮಣ್ಣಬಾವಿಯಿದೆ. ಉತ್ತರಕ್ಕೆ ವೀರಾಂಜನೇಯಸ್ವಾಮಿ ದೇವಾಲಯವಿದೆ. ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಹೆಣ್ಣುಮಕ್ಕಳು ಗೃಹಿಣಿಯರು ವೃದ್ಧರು ದೇವಾಲಯಗಳಿಗೆ ಬಂದು ಹೋಗುವರು. ಹತ್ತಿರದಲ್ಲಿಯೇ ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಬ್ಯಾಂಕ್ ಕೂಡ ಕಾರ್ಯನಿರ್ವಹಿಸುತ್ತದೆ. ಅಲ್ಲಿಗೆ ನೂರಾರು ರೈತರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಬಂದು ಹೋಗುವರು.
ಈ ಸ್ಥಳದಲ್ಲಿ ಮದ್ಯಮಳಿಗೆಯನ್ನು ಸ್ಥಾಪಿಸುವುದನ್ನು ವಿವಿಧ ರೈತ ಸಂಘಟನೆಯ ಸದಸ್ಯರು, ಕನ್ನಡಪರ ಸಂಘಟನೆಗಳ ಸದಸ್ಯರು, ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಹಾಗೂ ಇಲ್ಲಿ ವಾಸಿಸುವ ನಾಗರೀಕರು ವಿರೋಧಿಸಿದ್ದಾರೆ. ಸುತ್ತಮುತ್ತಲಿನಲ್ಲಿ ವಾಸಿಸುವವರ ಗಮನಕ್ಕೆ ತರದೇ ಅಧಿಕಾರಿಗಳು ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿ ಮದ್ಯಮಳಿಗೆಯನ್ನು ಸ್ಥಾಪಿಸಲು ಮುಂದಾದರೆ ಉಗ್ರ ಹೋರಾತವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.