
Sidlaghatta : ಶಿಡ್ಲಘಟ್ಟ ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಅಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಕುಸಿದ ರಸ್ತೆಗುಂಡಿಗಳ ಸುಧಾರಣೆ ಕುರಿತಂತೆ, ಶಾಸಕ ಬಿ.ಎನ್.ರವಿಕುಮಾರ್ ಅವರು ವಿಧಾನಮಂಡಲದಲ್ಲಿ ಗಂಭೀರವಾಗಿ ಧ್ವನಿ ಎತ್ತಿದ್ದಾರೆ.
ಬುಧವಾರ, ವಿಧಾನಸಭೆಯಲ್ಲಿ ಸ್ಪೀಕರ್ ಮಾತನಾಡಲು ಅವಕಾಶ ನೀಡಿದಾಗ, ಅವರು ತಮ್ಮ ಕ್ಷೇತ್ರದ ಹಿಂದುಳಿದ ಪರಿಸ್ಥಿತಿಯನ್ನು ಚರ್ಚಿಸಿದರು. “ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 60,000 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರಿದ್ದಾರೆ. ಆದರೆ 2024-25 ನೇ ಸಾಲಿನಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗೌರಿಬಿದನೂರಿಗೆ ₹9 ಕೋಟಿ, ಚಿಕ್ಕಬಳ್ಳಾಪುರಕ್ಕೆ ₹4 ಕೋಟಿ, ಬಾಗೇಪಲ್ಲಿಗೆ ₹4 ಕೋಟಿ ಅನುದಾನ ನೀಡಲಾಗಿದ್ದರೂ, ಶಿಡ್ಲಘಟ್ಟ ಮಾತ್ರ ಅನುದಾನವಿಲ್ಲದೆ ನಿರ್ಲಕ್ಷ್ಯಗೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ 215 ಕಿಲೋಮೀಟರ್ ರಸ್ತೆಗಳು ಬಹಳ ದುಸ್ಥಿತಿಯಲ್ಲಿದ್ದು, ಇತ್ತೀಚೆಗೆ ಸಂಭವಿಸಿದ 17 ಅಪಘಾತಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆಗಳನ್ನು ಸರಿಪಡಿಸಲು ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಕ್ಷೇತ್ರದ ರಾಜಕೀಯ ಇತಿಹಾಸದ ಬಗ್ಗೆ ಮಾತನಾಡುತ್ತಾ, “ಶಿಡ್ಲಘಟ್ಟದಲ್ಲಿ 16 ವಿಧಾನಸಭಾ ಚುನಾವಣೆಯ ಪೈಕಿ 11 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ, ಈವರೆಗೆ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಕೂಡ ಸಾಧ್ಯವಾಗಿಲ್ಲ. ನಾನು ಶಾಸಕನಾಗಿ 22 ತಿಂಗಳು ಕಳೆದರೂ, 100 ಮೀಟರ್ ಕೂಡ ಕಾಂಕ್ರೀಟ್ ರಸ್ತೆ ಅಥವಾ ಚರಂಡಿ ನಿರ್ಮಾಣ ಮಾಡಲಾಗಿಲ್ಲ. ಪ್ರಗತಿ ಕಾಲೋನಿ ಯೋಜನೆಯಡಿ ಇನ್ನೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಎಸ್‌ಸಿಪಿ ಮತ್ತು ಟಿಎಸ್‌ಪಿಯಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಒಂದು ರೂಪಾಯಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ” ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
2023-24 ಮತ್ತು 2024-25 ಸಾಲಿನಲ್ಲಿ ಆದಿಜಾಂಭವ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ ಕೇವಲ ಒಂದೇ ಒಂದು ಕೊಳವೆ ಬಾವಿಗೆ ಅನುಮತಿ ನೀಡಿರುವುದು ದುರಾದೃಷ್ಟಕರ ಎಂದು ಅಭಿಪ್ರಾಯಪಟ್ಟ ಅವರು, ಶಿಡ್ಲಘಟ್ಟ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆ ಹೆಚ್ಚಿರುವುದರಿಂದ ಸರ್ಕಾರ ಹಾಗೂ ಪಂಚಾಯತ್ ರಾಜ್ ಇಲಾಖೆ ಇದರ ಬಗ್ಗೆ ತ್ವರಿತವಾಗಿ ಗಮನಹರಿಸಬೇಕು ಮತ್ತು ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.