ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಬೈರೇನಹಳ್ಳಿ ಸಮೀಪ ಕಲ್ಲುಗಣಿಗಾರಿಕೆಗೆ ಕೆಲವು ಕಂಪನಿಗಳು ಅರ್ಜಿ ಸಲ್ಲಿಸಿದ್ದು ವರ್ಷಗಳೆ ಕಳೆದಿವೆ. ಗಣಿಗಾರಿಕೆ ನಡೆಸಲು ಉದ್ದೇಶಿಸಿದ್ದ ಜಾಗದಲ್ಲಿ ಸ್ಥಳೀಯರ ಸಭೆ ನಡೆಸದ ಕಾರಣ ಅರ್ಜಿ ವಿಲೇವಾರಿ ತಡವಾಗಿತ್ತು. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಿದ್ದ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ರಾಜ್ಯ ಹೈ ಕೋರ್ಟ್ ಕೂಡಲೆ ಪುರಬೈರೇನಹಳ್ಳಿಯಲ್ಲಿ ಸುತ್ತ ಮುತ್ತಲ ಗ್ರಾಮಸ್ಥರ ಸಾರ್ವಜನಿಕರ ಸಭೆ ನಡೆಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು.
ಈ ಹಿನ್ನಲೆಯಲ್ಲಿ ಪುರಬೈರೇನಹಳ್ಳಿಯ ಬಂಡೆ ಜಾಗದಲ್ಲಿಯೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರ್ವಜನಿಕರ ಸಂಘ ಸಂಸ್ಥೆಗಳ ಪರಿಸರ ಆಲಿಕೆ ಸಭೆಯನ್ನು ಮಂಗಳವಾರ ನಡೆಸಲಾಯಿತು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, “ಇಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಗಣಿಗಾರಿಕೆ ನಡೆಸುವ ಸಂಬಂಧ ಪರವಾದ ಹಾಗೂ ವಿರೋಧವಾದ ಎಲ್ಲ ಅಭಿಪ್ರಾಯ ಅನಿಸಿಕೆಗಳನ್ನು ರೆಕಾರ್ಡ್ ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತದೆ. ಗಣಿಗಾರಿಕೆಗೆ ಅನುಮತಿ ನೀಡುವುದು ಬಿಡುವುದು ಪ್ರಾಧಿಕಾರದ ಅಧಿಕಾರ, ಇಲ್ಲಿ ನಾವು ಕೇವಲ ಹೈ ಕೋರ್ಟ್‌ನ ಸೂಚನೆಯಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವ ಕೆಲಸವನ್ನಷ್ಟೆ ಮಾಡುತ್ತಿದ್ದೇವೆ” ಎಂದರು.
ಸುತ್ತ ಮುತ್ತಲ ಗ್ರಾಮಸ್ಥರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಗಣಿ ಉದ್ದಿಮೆದಾರರಾದ ಗೋವಿಂದರಾಜು, ಚೌಡಸಂದ್ರ ಮಂಜುನಾಥ್, ಡಿ.ಪಿ.ನಾಗರಾಜ್, ಅಶ್ವತ್ಥನಾರಾಯಣರೆಡ್ಡಿ, ವೆಂಕಟಸ್ವಾಮಿ, ರಾಜಣ್ಣ, ರಾಮಚಂದ್ರಪ್ಪ, ಡಿ.ಎಸ್.ಎನ್.ರಾಜು, ಸಾದಲಿ ವೆಂಕಟಾಚಲಪತಿ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಹಾಜರಿದ್ದರು.