Sidlaghatta : ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯಲ್ಲಿಯೂ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ (PM Poshan Shakti Nirman) ಯೋಜನೆಯಡಿ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಬಿಸಿಯೂಟ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದ್ದಾರೆ.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿದ ಅವರು ಬೇಸಿಗೆ ರಜಾ ಅವಧಿಯ ಬಿಸಿಯೂಟ ವ್ಯವಸ್ಥೆಯ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು.
ಏಪ್ರಿಲ್-11 ರಿಂದ ಮೇ 28 ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಆ ನಿಟ್ಟಿನಲ್ಲಿ ಏಪ್ರಿಲ್-11 ರಿಂದ ಮೇ-28 ರವರೆಗಿನ ಭಾನುವಾರ ಹೊರತುಪಡಿಸಿ ಇನ್ನುಳಿದ ಸುಮಾರು 41 ದಿನಗಳ ಕಾಲ ಸರ್ಕಾರ ಬರಪೀಡಿತ ತಾಲ್ಲೂಕುಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿದ್ದ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯಲ್ಲಿಯೂ ಬಿಸಿಯೂಟ ನೀಡಲು ನಿರ್ಧರಿಸಲಾಗಿದೆ ಎಂದರು.
ಅಡುಗೆ ಕೇಂದ್ರಗಳನ್ನು ಗುರ್ತಿಸುವಿಕೆ: ಬೇಸಿಗೆ ರಜಾ ಅವಧಿಯ ಬಿಸಿಯೂಟ ನೀಡಲು ಈಗಾಗಲೇ ಕೇಂದ್ರಶಾಲೆಗಳನ್ನು ಗುರ್ತಿಸಲಾಗಿದೆ. ಆಯಾ ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕೇಂದ್ರವಾಗಿಸಿದ್ದು ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದರೆ ಈಗಾಗಲೇ ಮ್ಯಾಪಿಂಗ್ ಮಾಡಿ ಮಾಹಿತಿ ನೀಡಲಾಗಿದ್ದು, ಬಿಸಿಯೂಟ ನೀಡುವ ಕೇಂದ್ರಗಳಲ್ಲಿ ಮಕ್ಕಳು ಊಟ ಪಡೆಯಬಹುದಾಗಿದೆ. 9 ಮತ್ತು 10 ನೇ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳು ಬಿಸಿಯೂಟ ಕೇಂದ್ರಗಳಲ್ಲಿ ಬಿಸಿಯೂಟ ಪಡೆಯಬಹುದಾಗಿದೆ ಎಂದರು.
ಬಿಸಿಯೂಟ ಪಡೆಯಲಿಚ್ಚಿಸುವ ಮಕ್ಕಳ ಒಪ್ಪಿಗೆ ಪತ್ರದ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದ್ದು ಕೇಂದ್ರ, ಅಡುಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಎಲ್ಲಾ ಮುಗಿದಿದೆ. ಬಾಗೇಪಲ್ಲಿ ತಾಲ್ಲೂಕಿನ 214, ಚಿಕ್ಕಬಳ್ಳಾಪುರ ತಾಲ್ಲೂಕಿನ 228, ಚಿಂತಾಮಣಿ ತಾಲ್ಲೂಕಿನ 287, ಗೌರಿಬಿದನೂರು ತಾಲ್ಲೂಕಿನ 298, ಗುಡಿಬಂಡೆ ತಾಲ್ಲೂಕಿನ 89, ಶಿಡ್ಲಘಟ್ಟ ತಾಲ್ಲೂಕಿನ 236 ಶಾಲಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1352 ಕೇಂದ್ರಗಳಲ್ಲಿ ಬಿಸಿಯೂಟ ವಿತರಣೆ ನಡೆಯಲಿದೆ.
ಬಿಸಿಯೂಟ ಪಡೆಯಲು ಈಗಾಗಲೇ ಬಾಗೇಪಲ್ಲಿ ತಾಲ್ಲೂಕಿನಲ್ಲಿ 9813, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 10,905, ಚಿಂತಾಮಣಿ ತಾಲ್ಲೂಕಿನಲ್ಲಿ 12,670, ಗೌರಿಬಿದನೂರು ತಾಲ್ಲೂಕಿನಲ್ಲಿ 20,674, ಗುಡಿಬಂಡೆ ತಾಲ್ಲೂಕಿನಲ್ಲಿ 3542, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 10,095 ವಿದ್ಯಾರ್ಥಿಗಳು ಒಪ್ಪಿಗೆ ಪತ್ರ ನೀಡಿದ್ದು ಒಟ್ಟು 67,699 ವಿದ್ಯಾರ್ಥಿಗಳು ಬೇಸಿಗೆ ರಜೆಯ ಬಿಸಿಯೂಟ ಪಡೆಯಲಿದ್ದಾರೆ. ಬೇರೊಂದು ಗ್ರಾಮದ ಬೇರೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ಮಕ್ಕಳು ರಜೆ ಅವಧಿಯಲ್ಲಿ ಬೇರೊಂದು ಕಡೆ ಇದ್ದರೆ ಶಿಕ್ಷಕರ ಗುರ್ತಿಸುವಿಕೆಯ ನಂತರ ಅಲ್ಲಿಯೇ ಬಿಸಿಯೂಟ ಪಡೆಯಬಹುದಾಗಿದೆ. ಬೇಸಿಗೆ ರಜಾ ಅವಧಿ ಬಿಸಿಯೂಟಕ್ಕೆ ಅಗತ್ಯವಾದ ಆಹಾರಧಾನ್ಯಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದ್ದು, ತರಕಾರಿ ಮತ್ತಿತರ ಖರ್ಚಿಗೆ ಬೇಕಾದ ಹಣಕಾಸನ್ನು ಈಗಾಗಲೇ ಮುಖ್ಯಶಿಕ್ಷಕರ ಖಾತೆಗೆ ಜಮಾಯಿಸಲಾಗಿದೆ ಎಂದರು.
1979 ಅಡುಗೆ ಸಿಬ್ಬಂದಿ ನೇಮಕ: ಬಿಸಿಯೂಟ ವಿತರಿಸುವ ಜವಬ್ದಾರಿಯನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ವಹಿಸಲಾಗಿದ್ದು ಜಿಲ್ಲೆಯಲ್ಲಿ 1352 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಅಷ್ಟಲ್ಲದೇ ಜಿಲ್ಲೆಯಲ್ಲಿನ 250 ಕ್ಕಿಂತ ಹೆಚ್ಚು ಮಕ್ಕಳಿರುವ ಕೇಂದ್ರಗಳಿಗೆ ಹೆಚ್ಚುವರಿಯಾಗಿ 48 ಮಂದಿಯನ್ನು ನೋಡಲ್ ಶಿಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಬೇಸಿಗೆ ರಜಾ ಅವಧಿಯಲ್ಲಿ ಅಡುಗೆ ತಯಾರಿಗಾಗಿ 1979 ಮಂದಿ ಅಡುಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 337, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 350, ಚಿಂತಾಮಣಿ ತಾಲ್ಲೂಕಿನಲ್ಲಿ 380, ಗೌರಿಬಿದನೂರು ತಾಲ್ಲೂಕಿನಲ್ಲಿ 468, ಗುಡಿಬಂಡೆ ತಾಲ್ಲೂಕಿನಲ್ಲಿ 95, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 349 ಮಂದಿ ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ನೋಡಲ್ ಅಧಿಕಾರಿಗಳ ನೇಮಕ: ಬಿಸಿಯೂಟ ವಿತರಣೆಯ ಯೋಜನೆಯ ಅನುಯಷ್ಟಾನವನ್ನು ಮೇಲ್ವಿಚಾರಣೆ ಮಾಡಲು ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಒ ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಉಸ್ತುವಾರಿಯ ಬಗ್ಗೆ ಈಗಾಗಲೇ ಗೂಗಲ್ ಮೀಟ್ ಸಭೆಗಳ ಮೂಲಕ ತರಬೇತಿ ನೀಡಲಾಗಿದೆ. ಪ್ರತಿದಿನವೂ ಅವರು ಶಾಲೆಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡುವರು. ಮಕ್ಕಳ ಹಾಜರಾತಿ, ಅಡುಗೆ ಸಿಬ್ಬಂದಿ ಹಾಜರಾತಿ, ದಾಸ್ತಾನು, ಶುಚಿ-ರುಚಿ, ಕುಡಿಯುವ ನೀರಿನ ಸೌಲಭ್ಯ ಕುರಿತು ಉಸ್ತುವಾರಿ ಮಾಡಲಾಗುವುದು. ಪ್ರತಿದಿನವೂ ಮಕ್ಕಳ ಹಾಜರಾತಿಯನ್ನು ಎ.ಎಂ ಎಸ್ ಮೂಲಕ ಸಂಗ್ರಹಿಸಲಾಗುವುದು ಎಂದರು.
ಪ್ರಯೋಜನ ಪಡೆಯಲು ಸಲಹೆ: ಸರ್ಕಾರವು ಒದಗಿಸಿರುವ ಬಿಸಿಯೂಟ ಸೌಲಭ್ಯದ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯ ಮಕ್ಕಳು ಪಡೆಯಬೇಕು. ಪೋಷಕರು, ಸ್ವಯಂಸೇವಾಸಂಸ್ಥೆಗಳು ಯೋಜನೆಯ ಅನುಷ್ಟಾನದಲ್ಲಿ ಸಹಕರಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಅಡುಗೆ ಸಿಬ್ಬಂದಿ, ಶಿಕ್ಷಕರು ಹಾಜರಿದ್ದರು.