Sidlaghatta : ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಬಹು ಮುಖ್ಯ. ಈ ಹಿನ್ನೆಲೆಯಲ್ಲಿ ಸಮಸ್ಯೆಯಿದ್ದಾಗ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಪೂಜಾ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ದೇಹಕ್ಕೆ ಹೇಗೆ ಜ್ವರ ನೆಗಡಿ ಇನ್ನಿತರೆ ಬಾಧೆಗಳು ಕಾಡಿಸುತ್ತವೆಯೋ, ಅದೇ ರೀತಿ ಮನುಷ್ಯನ ಮೆದುಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಎಚ್ಚರ ವಹಿಸಿ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಬೇಕು.
ಹಿರಿಯ ನಾಗರಿಕರನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳು ತಂದೆ ತಾಯಿಗಳನ್ನು ಗೌರವದಿಂದ ಕಾಣಬೇಕು. ಹಿರಿಯ ನಾಗರಿಕರಿಗೆ ಅನ್ಯಾಯವಾದಾಗ, ಅವರಿಗಾಗಿ ಕಾನೂನುಗಳಿವೆ. ಅವುಗಳ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಮಾತನಾಡಿ, ಮಾನಸಿಕ ಖಿನ್ನತೆಗೆ ಎಲ್ಲಾ ರೀತಿಯ ಚಿಕಿತ್ಸೆಗಳು ಲಭ್ಯವಿದ್ದು, ಅದನ್ನು ಗೌಪ್ಯವಾಗಿಟ್ಟುಕೊಳ್ಳದೆ ವೈದ್ಯರ ಹತ್ತಿರ ಸಮಾಲೋಚನೆ ಮಾಡಿದಾಗ ಅದಕ್ಕೆ ಪರಿಹಾರ ತಿಳಿಸಿ ಗುಣಮುಖರಾಗಲು ಸಹಾಯ ಮಾಡುತ್ತಾರೆಂದರು.
60 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಲವು ಖಾಯಿಲೆಗಳು ಬರುವುದು ಸಹಜ, ಹಾಗೆಂದು ಅವರನ್ನು ಅಸಡ್ಡೆ ಮಾಡದೆ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದಲ್ಲಿ ಅವರು ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾದಿಕಾರಿ ಡಾ.ವೆಂಕಟೇಶ್‌ಮೂರ್ತಿ, ತಾಲ್ಲೂಕು ವಕೀಲರ ಸಂಘದ ಅದ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.