Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ 78 ನೇ ಸ್ವಾತಂತ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮೇಲೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಶಶಿಕಲಾ ಧ್ವಜಾರೋಹಣ ನೆರವೇರಿಸಿದರು.
ಗ್ರಾಮದ ಮುಖ್ಯ ಬೀದಿಗಳಲ್ಲಿ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಪಥ ಸಂಚಲನೆ ಮಾಡಿ ಸ್ವಾತಂತ್ರ್ಯ ಬರಲು ಕಾರಣರಾದ ಮಹನೀಯರ ಹೆಸರು ಹೇಳಿ ಜಯಕಾರ ಕೂಗುತ್ತಾ ಸಾಗಿದರು.
ಸರ್ಕಾರಿ ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿಕ್ಲಬ್ ವಿಜಯಪುರ ಮಾಜಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ” ನಮಗೆ ಸ್ವತಂತ್ರ ತಂದು ಕೊಟ್ಟ ಮಹನೀಯರನ್ನು ಸ್ಮರಿಸಿಕೊಳ್ಳೋಣ. ಮಕ್ಕಳು ಶಿಸ್ತುಸಂಯಮ ರೂಢಿಸಿಕೊಳ್ಳಬೇಕು. ನೀವು ಕೂಡ ದೇಶಕ್ಕಾಗಿ ಎನಾದರೂ ಕೊಡುಗೆ ನೀಡುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು” ಎಂದು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಧಿಕಾರಿ ಹಾಗೂ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಟಿ. ಕೃಷ್ಣಪ್ಪ ಮಾತನಾಡಿ, ಸಮಾಜವನ್ನು ಕಟ್ಟಲು ಮಕ್ಕಳು ಈಗಿನಿಂದ ಏನೆಲ್ಲಾ ಗುರಿಗಳನ್ನು ಹೊಂದಿರಬೇಕು ಎಂಬುದಾಗಿ ವಿವರಿಸಿ, ಕೆಲವು ಹಿತನುಡಿಗಳನ್ನು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಮಾತನಾಡಿ, ನಮ್ಮನ್ನು ಬೆಳೆಸುವ ಸಮಾಜಕ್ಕೆ ನಾವು ಅದಾ ಋಣಿಗಳಾಗಿರುತ್ತೇವೆ. ಸಾಧ್ಯವಾದಷ್ಟೂ ಸಮಾಜಕ್ಕೆ ಕೊಡುಗೆ ನೀಡಬೇಕೆಂದರು.
ಹಳೆಯ ವಿದ್ಯಾರ್ಥಿಗಳಾದ ನಾಗೇಂದ್ರಪ್ರಸಾದ್ ಮತ್ತು ಸ್ನೇಹಿತರು ಪ್ರತಿ ವರ್ಷದಂತೆ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನಿವೃತ್ತ ಮುಖ್ಯಶಿಕ್ಷಕ ಟಿ. ಕೃಷ್ಣಪ್ಪ ಅವರನ್ನು ಸನ್ಮಾನ ಮಾಡಿದರು. ಮೇಲೂರು ಕೆನರಾಬ್ಯಾಂಕ್ ನವರು ಎಲ್ಲಾ ಶಾಲೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಕ್ರಮವಾಗಿ 5000 ಮತ್ತು 3000 ರೂ ಬಹುಮಾನ ವಿತರಿಸಿದರು. ಮಕ್ಕಳು ಸ್ವಾತಂತ್ಯ ದಿನಾಚರಣೆಯ ಹಾಡುಗಳಿಗೆ ನೃತ್ಯ ಮಾಡಿದರು. ಸೆಂಟ್ ಥಾಮಸ್ ಶಾಲೆಯವರು ಪ್ರದರ್ಶಿಸಿದ “ನಾವೆಲ್ಲ ಒಂದೇ” ನೃತ್ಯ ರೂಪಕ ಅರ್ಥಪೂರ್ಣವಾಗಿತ್ತು. ಮೇಲೂರು ಗ್ರಾಮಪಂಚಾಯಿತಿಯಿಂದ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡಿಸಿದ್ದರು. ಹಾಲು ಉತ್ಪಾದಕರ ಸಂಘದ ವತಿಯಿಂದ ಮಕ್ಕಳಿಗೆ ಸಿಹಿ ಹಂಚಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಶಿವಾನಂದ್, ಸದಸ್ಯರಾದ ಎಂ.ಜೆ. ಶ್ರೀನಿವಾಸ್, ಗಜೇಂದ್ರ, ದೇವರಾಜ್, ವನಿತಾ, ಸವಿತ, ಭಾಗ್ಯಮ್ಮ, ಶೋಭಾ, ಪಿಡಿಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಹಾಲು ಉತ್ಪಾದಕರಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸ್, ರಮೇಶ್ ಮತ್ತು ಸದಸ್ಯರು, ಪ್ರೌಢಶಾಲೆ ಮುಖ್ಯಶಿಕ್ಷಕ ಭಾಸ್ಕರ್, ಮಧ್ಯಮಿಕ ಶಾಲೆ ಮುಖ್ಯ ಶಿಕ್ಷಕಿ ರುಕ್ಮಿಣಿಯಮ್ಮ, ಶಿಕ್ಷಕರು, ಮೇಲೂರು ಸೆಂಟ್ ಥಾಮಸ್ ಶಾಲೆಯ ಮುಖ್ಯ ಶಿಕ್ಷಕ ಆನಂದ್ ಹಾಜರಿದ್ದರು.