Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಕಂಬದಹಳ್ಳಿ ರಸ್ತೆಯಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರದೆ ಚಿಕಿತ್ಸೆ ನೀಡುತ್ತಿದ್ದ ಕಾರಣದಿಂದ ಚೈತ್ರ ಕ್ಲಿನಿಕ್ ಅನ್ನು ಮುಚ್ಚಿಸಿರುವ ಘಟನೆ ಮಂಗಳವಾರ ನಡೆದಿದೆ.
ಕ್ಲಿನಿಕ್ ಮುಚ್ಚಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನ ಮಾನವ ಹಕ್ಕುಗಳ ಸಂಸ್ಥೆಯಿಂದ ಚೈತ್ರ ಕ್ಲಿನಿಕ್ ನಡೆಸುತ್ತಿರುವವರ ವಿದ್ಯಾರ್ಹತೆ ಪರಿಶೀಲಿಸುವಂತೆ ಲಿಖಿತ ದೂರು ಬಂದಿತ್ತು. ಅದರಂತೆ ನಾನು ಹೋಗಿ ಪರಿಶಿಲನೆ ನಡೆಸಿದಾಗ, ಕ್ಲಿನಿಕ್ ನಡೆಸುತ್ತಿದ್ದ ವೆಂಕಟೇಶ್ವರ ರಾವ್ ಅವರ ಬಳಿ ಸೂಕ್ತ ದಾಖಲೆಗಳಿರಲಿಲ್ಲ.
ಅವರು, ತಮ್ಮ ಬಳಿ ಉಚ್ಛ ನ್ಯಾಯಾಲಯದ ಅನುಮತಿ ಇದೆ. ನಾವು ಪಾರಂಪರಿಕ ವೈದ್ಯ ಪದ್ಧತಿಯನ್ನು ಅನುಸರಿಸುವ ವೈದ್ಯರೆಂದು ಪರಿಗಣಿಸಿದ್ದಾರೆ ಎಂದರು. ಯಾವುದೇ ದಾಖಲೆಗಳನ್ನು ಹೊಂದಿರದಿದ್ದಲ್ಲಿ ಕಾನೂನಿನ ಪ್ರಕಾರ ತಪ್ಪು. ಕ್ಲಿನಿಕ್ ನಡೆಸಲು ಕೆ.ಪಿ.ಎಂ.ಇ ಪರವಾನಗಿ ಹೊಂದಿರಲೇ ಬೇಕು ಎಂದು ಹೇಳಿ, ದಾಖಲೆಗಳನ್ನು ತಂದು ಕೊಡಲು ನೋಟೀಸ್ ಕೊಟ್ಟೆ. ಅದುವರೆಗೂ ಕ್ಲಿನಿಕ್ ತೆಗೆಯಬಾರದೆಂದು ತಿಳಿಸಿದೆ. ಆನಂತರ ನಮ್ಮ ಕಚೇರಿಗೆ ಬಂದು ಸಂಬಂಧಿಸಿರದ ಅನುಮತಿ ಪತ್ರಗಳನ್ನು ತೋರಿಸಿದರು. ಅದನ್ನು ನಾವು ಒಪ್ಪಲು ಆಗದು, ನಿಮ್ಮ ಹೆಸರಿನಲ್ಲಿ, ನಿಮ್ಮ ಕ್ಲಿನಿಕ್ ಹೆಸರಿಗೆ ನ್ಯಾಯಾಲಯದ ಅನುಮತಿ ಇದ್ದರೆ ತೋರಿಸಿ ಎಂದೆ. ತಂದುಕೊಡುವೆ ಎಂದು ಹೋದವರು ಬರಲಿಲ್ಲ.
ಈ ದಿನ ಕ್ಲಿನಿಕ್ ತೆರೆದಿರುವ ಬಗ್ಗೆ ಬೆಂಗಳೂರಿನ ಮಾನವ ಹಕ್ಕುಗಳ ಸಂಸ್ಥೆಯಿಂದ ವ್ಯಾಟ್ಸಪ್ ಮೂಲಕ ಚಿತ್ರಗಳು ಬಂದವು. ತಕ್ಷಣವೇ ಆರೋಗ್ಯ ನಿರೀಕ್ಷಕ ದೇವರಾಜ್ ಮತ್ತು ನಾನು ಹೋಗಿ ಕ್ಲಿನಿಕ್ ಮುಚ್ಚಿಸಿ, ಹೈ ಕೋರ್ಟ್ ಆರ್ಡರ್ ಕಾಪಿ ತಂದು ತೋರಿಸಿ, ತದನಂತರ ಕೆ.ಪಿ.ಎಂ.ಇ ನೋಂದಣಿ ಮಾಡಿಸುವವರೆಗೂ ಕ್ಲಿನಿಕ್ ಮುಚ್ಚಬೇಕೆಂದು ಹೇಳಿ ಬಂದಿದ್ದೇವೆ” ಎಂದು ತಿಳಿಸಿದರು.