Sidlaghatta : ಶಿಡ್ಲಘಟ್ಟ ನಗರಸಭೆ (City Municipal council) ಕಾರ್ಯಾಲಯದಲ್ಲಿ ಮಂಗಳವಾರ ನಗರಾಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ (Manual Scavenger Census) ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಯ ಅಶೋಕ್ ಮಾತನಾಡಿದರು.
ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರವು ಕೈಗವಸು, ಶೂಸ್, ಮುಖಗವಸು, ಗುಣಮಟ್ಟದ ಉಪಹಾರ,ಇತರೆ ಸೌಲಭ್ಯಗಳನ್ನು ಒದಗಿಸಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಹಾಗೂ ಜೀವ ವಿಮೆಯನ್ನು ಮಾಡಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಪೌರಕಾರ್ಮಿಕರ ಶ್ರಮವನ್ನು ಕಡಿಮೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ಮಚಾರಿಗಳ ಸುರಕ್ಷತೆ ಸಂಬಂಧ 2013ರಲ್ಲಿ ಕಾನೂನು ಬಂದ ನಂತರ ಆಗಿರುವ ಬದಲಾವಣೆ ಗಮನಾರ್ಹ. ಕರ್ಮಚಾರಿ ಸೇವೆ ಸಂಬಂಧ ಮಾಡಿರುವ ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಅಧಿಕಾರಿಗಳು ಸಫಾಯಿ ಕರ್ಮಚಾರಿಗಳಿಗೆ ಸರಿಯಾದ ಉಪಕರಣಗಳನ್ನು ಒದಗಿಸಬೇಕು. ಒದಗಿಸಿದ ಉಪಕರಣಗಳನ್ನು ಬಳಸುವ ವಿಧಾನದ ಬಗೆಗಿನ ಮಾಹಿತಿಯನ್ನು ಕರ್ಮಚಾರಿಗಳಿಗೆ ನೀಡಬೇಕು. ಕೆಲಸ ಮಾಡಬೇಕಾದ ಸ್ಥಳಕ್ಕೆ ಸದರಿ ಉಪಕರಣಗಳ ಕೊಂಡೊಯ್ಯಬೇಕು. ಯಾರಾದರೂ ಹಾಗೆಯೇ ಉಪಕರಣಗಳಿಲ್ಲದೇ ಕೆಲಸ ಮಾಡಲು ತಿಳಿಸಿದರೆ. ಬರಿಗೈಯಲ್ಲಿ ಕೆಲಸ ಮಾಡಬಾರದು ಎಂದು ತಿಳಿ ಹೇಳಿದರು.
ನಗರ ಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಾತನಾಡಿ, ಸಫಾಯಿ ಕರ್ಮಚಾರಿಗಳು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಅದಕ್ಕಾಗಿ ಅವರಿಗೆ ನಗರಸಭೆ ವತಿಯಿಂದ ಸುರಕ್ಷಾ ಪರಿಕರಗಳನ್ನು ನೀಡಿ ಅವುಗಳನ್ನು ತಪ್ಪದೇ ಬಳಸಲು ತಿಳಿಸಲಾಗುತ್ತಿದೆ ಎಂದರು.
ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಇದರಿಂದ ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗುತ್ತದೆ. ಸಫಾಯಿ ಕರ್ಮಚಾರಿಗಳಿರುವ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ಕಾಂಕ್ರೀಟ್ ರಸ್ತೆ, ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಕಾರ್ಮಿಕ ಇಲಾಖೆಯ ಮಂಜುಳಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಿ.ಡಿ.ಪಿ.ಒ ಇಲಾಖೆಯ ಜಗದೀಶ್ ಉಪಸ್ಥಿತರಿದ್ದರು.
.