Mallur, Sidlaghatta : ಶಿಡ್ಲಘಟ್ಟ ತಾಲ್ಲೂಕು ಮಳ್ಳೂರಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರ, ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಶ್ರಯದಲ್ಲಿ ಭಾನುವಾರ ಮಳ್ಳೂರು ಗ್ರಾಮದಲ್ಲಿನ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ 12 ನೇ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಸಂದೀಪ್ ಪುವ್ವಾಡ ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಜತೆಗೆ ದಂತ, ಕ್ಯಾನ್ಸರ್ ಮತ್ತು ಹೃದಯ ತಪಾಸಣೆ ಶಿಬಿರ ನಡೆಯುತ್ತಿದೆ.
ಜತೆಗೆ ಮಕ್ಕಳ ರೋಗ ತಜ್ಞರು, ಸ್ತ್ರೀರೋಗ ತಜ್ಞರು, ನೇತೃ ತಜ್ಞರು ಮತ್ತು ಚರ್ಮ ರೋಗ ತಜ್ಞರು ಆಗಮಿಸಿದ್ದು ತಪಾಸಣೆ ಮತ್ತು ಔಷದೋಪಚಾರ ಮಾಡುತ್ತಿದ್ದಾರೆ.
ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಸುಮಾರು 45 ಮಂದಿಗೆ ಹೃದಯ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಅವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಕರೆತರಲಾಗುವುದು ಎಂದರು.
ಮಳ್ಳೂರಿನ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಇದೀಗ ಮಕ್ಕಳು ಹಾಗೂ ಗರ್ಭಿಣಿಯರಿಗೆ ಚಿಕಿತ್ಸಾ ಕೇಂದ್ರ ಪ್ರಾರಂಭಿಸಿದ್ದು, ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಉಚಿತ ಚಿಕಿತ್ಸೆ ಮತ್ತು ಔಷದೋಪಚಾರ ಒದಗಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆದ ಶಿಬಿರದಲ್ಲಿ 450 ಕ್ಕೂ ಹೆಚ್ಚು ಮಂದಿ ನುರಿತ ತಜ್ಞರಿಂದ ತಪಾಸಣೆ ಮಾಡಿಸಿಕೊಂಡರು. ರಕ್ತದಾನಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು. ಎಲ್ಲರಿಗೂ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.
ಹೆಚ್ಚುವರಿ ಪೋಲೀಸ್ ವರಿಷ್ಠಾಕಾರಿ ಆರ್.ಐ.ಖಾಸಿಂ ಮಾತನಾಡಿ, ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರ ಹಾಗೂ ಪುವ್ವಾಡ ಫೌಂಡೇಷನ್ ಮೂಲಕ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದೆ ರೀತಿ ಸೇವೆ ಯಾವುದೆ ಅಡ್ಡಿ ಆತಂಕವಿಲ್ಲದೆ ಮುಂದುವರೆಯಲಿ ನಮ್ಮೆಲ್ಲರ ಸಹಕಾರ ಇರಲಿದೆ ಎಂದರು.
ಮಕ್ಕಳ ರೋಗ ತಜ್ಞರು, ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು ಮತ್ತು ಚರ್ಮ ರೋಗ ತಜ್ಞರು ಶಿಬಿರದಲ್ಲಿ ತಪಾಸಣೆ ನಡೆಸಿ ಔಷದೋಪಚಾರ ಮಾಡಿದರು. ವಿಕಲಚೇತನ ಯುವಕನಿಗೆ 1.1 ಲಕ್ಷ ರೂ.ವೆಚ್ಚದ ಟ್ರೈಸೈಕಲ್ ಹಾಗೂ ಆಶಾಕಿರನ ಅಂಧ ಮಕ್ಕಳ ಶಾಲೆಗೆ ಯುಪಿಎಸ್ ಸಿಸ್ಟಂ, ಪ್ಯಾನ್ ನೀಡಲಾಯಿತು.
45 ಮಂದಿಗೆ ಹೃದಯ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು ಎಂದು ಡಾ.ಸಂದೀಪ್ ಪುವ್ವಾಡ ತಿಳಿಸಿದರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯ ಡಾ.ಪ್ರಸಾದ್ ಮೈಲಾರಪ್ಪ, ತಜ್ಞ ವೈದ್ಯರಾದ ಡಾ.ಜ್ಯೋತಿ, ಡಾ.ಪ್ರಸಾದ್, ಡಾ.ಸುನಿಲ್, ಎಂ.ಜೆ.ಕಲಾವತಿ ವೀರಕುಮಾರ್, ದೇವೇಗೌಡ ಜಯಪ್ರಕಾಶ್ ನಾರಾಯಣ್ ಟ್ರಸ್ಟ್‌ನ ಮೇಲೂರು ಬಿ.ಎನ್.ಸಚಿನ್, ಸ್ವಯಂ ಸೇವಕರಾದ ಮನೋಜ್, ಪ್ರವೀಣ್, ಮಂಜುನಾಥ್, ಪುಟ್ಟಣ್ಣ ಇನ್ನಿತರರು ಹಾಜರಿದ್ದರು.