
Malamachanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುಗ್ರಾಮ ಪಂಚಾಯಿತಿಗಳ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷಾ ಚಾಲನೆ ನೀಡಿದರು. ಈ ಸಂದರ್ಭ ಅವರು ಮಾತನಾಡಿ, ಘಟಕವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಗ್ರಾಮ ಪಂಚಾಯಿತಿಗಳ ಶ್ರೇಯೋಭಿವೃದ್ಧಿಗೆ ಪ್ರೇರಕವಾಗಿದೆ ಎಂದರು.
ಕಸ ವಿಂಗಡಿಸುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಅವರು, ಪ್ಲಾಸ್ಟಿಕ್, ಬಾಟಲ್, ಕೊಳೆತ ಹಣ್ಣು-ತರಕಾರಿಗಳನ್ನು ಪ್ರತ್ಯೇಕಿಸುವುದು ಅಗತ್ಯವಾಗಿದೆ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸ್ವಚ್ಛತಾ ವಾಹನಕ್ಕೆ ಹಸ್ತಾಂತರಿಸುವುದರಿಂದ ಉತ್ತಮ ಗೊಬ್ಬರ ನಿರ್ವಹಣೆ ಸಾಧ್ಯವಾಗಲಿದೆ. ಪರಿಸರ ಸ್ನೇಹಿ ಕ್ರಮಗಳ ಜಾರಿ ಗ್ರಾಮೀಣ ಅಭಿವೃದ್ಧಿಗೆ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆನೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಹಂಡಿಗನಾಳ, ಜಂಗಮಕೋಟೆ, ಹೊಸಪೇಟೆ, ನಾಗಮಂಗಲ, ಮಳ್ಳೂರು, ಮೇಲೂರು ಮತ್ತು ವೆಂಕಟಾಪುರ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ವಾಹನಗಳನ್ನು ಮಾವಿನ ತೋರಣ ಹಾಗೂ ಹೂವಿನೊಂದಿಗೆ ಅಲಂಕರಿಸಲಾಗಿದ್ದು, ಇದು ಎಲ್ಲರ ಗಮನಸೆಳೆದಿತು. ಈ ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಪಂಚಾಯತ್ ಎಸ್.ಬಿ.ಎಂ.ಜಿ. ಸಂಯೋಜಕರಾದ ಕೃಷ್ಣಪ್ಪ, ಆಂಜಿನಪ್ಪ, ತಾಲ್ಲೂಕು ಸಂಯೋಜಕ ಲೋಕೇಶ್ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು. ಸಮಾರಂಭ ಯಶಸ್ವಿಯಾಗಿ ನೆರವೇರಿತು.