Malamachanahalli, Sidlaghatta : ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (KOCHIMUL) ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು 2023-24 ನೇ ಸಾಲಿನ “ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸಂಘ” ವೆಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.
ಇಡೀ ಒಕ್ಕೂಟದಲ್ಲಿ ಮಳಮಾಚನಹಳ್ಳಿ ಎಂ.ಪಿ.ಸಿ.ಎಸ್ ಸಂಘವನ್ನು “ಅತ್ಯುತ್ತಮ ಸಹಕಾರ ಸಂಘ” ಎಂದು ಪ್ರಥಮ ಬಹುಮಾನ ಸಹ ನೀಡಲಾಗಿದೆ.
ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2023 -24 ನೇ ಸಾಲಿನಲ್ಲಿ 14,09,835 ರೂಗಳ ನಿವ್ವಳ ಲಾಭ ಗಳಿಸಿದ್ದು, ಉತ್ಪಾದಕರಿಗೆ, ಲಾಭಾಂಶದಲ್ಲಿ ಶೇಕಡ 1.66 ರಂತೆ ಸುಮಾರು 6,02,558 ರೂ ಬೋನಸ್ ದೀಪಾವಳಿ ಹಬ್ಬದಂದು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಎನ್.ರಾಮಚಂದ್ರಾಚಾರಿ ಹೆಮ್ಮೆಯಿಂದ ಹೇಳುತ್ತಾರೆ.
ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ 5 ಸಾವಿರ ಲೀಟರ್ ಹಾಲನ್ನು ಶೇಖರಿಸಿಡುವ ಶೀಥಲೀಕರಣ ಘಟಕವಿರುವುದು ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಾತ್ರವೇ ಎಂಬುದು ಈ ಸಂಘದ ಹೆಗ್ಗಳಿಕೆ.
ಸಂಪೂರ್ಣ ಗಣಕೀಕೃತಗೊಂಡಿರುವ ಈ ಸಂಘದಲ್ಲಿ ಹಾಲು ಹಾಕುವುದರಿಂದ ಹಿಡಿದು, ಅಲ್ಲಿಯೇ ಕೊಳ್ಳುವವರಿಗೂ, ಸಂಗ್ರಹಣೆಯಾದ ಹಾಲನ್ನು ಸರಬರಾಜು ಮಾಡುವವರೆಗೂ ಗಣಕೀಕೃತವಾಗಿರುವುದರಿಂದ ಪಾರದರ್ಶಕ ವಹಿವಾಟನ್ನು ನಡೆಸಲಾಗುತ್ತಿದೆ.
1970 – 71 ರಲ್ಲಿ ಸ್ಥಾಪನೆಯಾದ ಮಳಮಾಚನಹಳ್ಳಿ ಎಂ.ಪಿ.ಸಿ.ಎಸ್ 53 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿಕೊಂಡು ಇದುವರೆಗೂ ಸತತವಾಗಿ ಲಾಭಗಳಿಸುತ್ತಲೇ ಮುನ್ನುಗ್ಗುತ್ತಿದೆ. ಕಳೆದ ವರ್ಷ ಸುಮಾರು ಒಂದು ಕೋಟಿ ರೂಗಳ ಅತ್ಯುತ್ತಮ ಸ್ವಂತ ಕಟ್ಟಡವನ್ನು ಕಟ್ಟುವ ಮೂಲಕ ಜಿಲ್ಲೆಗೇ ಮಾದರಿಯಾಗಿದೆ.
ಈ ಸಂಘವು 2022 -23 ನೇ ಸಾಲಿನಲ್ಲಿ 3,32,68,000 ರೂಗಳಷ್ಟು ಹಾಲನ್ನು ರೈತರಿಂದ ಖರೀದಿಸಿ, 16,13,000 ರೂಗಳ ನಿವ್ವಳ ಲಾಭ ಗಳಿಸಿತ್ತು. ಪ್ರತಿ ದಿನ 3,300 ರಿಂದ 3,500 ಲೀಟರ್ ಹಾಲು ಸಂಗ್ರಹಿಸುವ ಈ ಸಂಘ ಕೋಮುಲ್ ನ ಹೆಮ್ಮೆ ಎನ್ನುತ್ತಾರೆ ಅಧಿಕಾರಿಗಳು.
“ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಯಶಸ್ಸಿನ ಗುಟ್ಟು ಇರುವುದು ಇಲ್ಲಿನ ಮಣ್ಣಿನ ಗುಣದಲ್ಲಿ. ಈ ಭಾಘವು ಅತ್ಯುತ್ತಮ ರೇಷ್ಮೆ ಮತ್ತು ಹಾಲನ್ನು ಉತ್ಪಾದಿಸುವುದರಲ್ಲಿ ದಶಕಗಳಿಂದಲೂ ಪ್ರಸಿದ್ಧಿ ಪಡೆದಿದೆ.
ರೇಷ್ಮೆಗೂ ಹಾಲಿಗೂ ಸಂಬಂಧವಿದೆ. ರೇಷ್ಮೆ ಉತ್ಪಾದಿಸುವವರೆಲ್ಲೂ ಹೈನುಗಾರರೇ ಆಗಿದ್ದಾರೆ. ರೇಷ್ಮೆಗೆ ಬಳಸುವ ಹಿಪ್ಪುನೇರಳೆ ಸೊಪ್ಪಿನ ಉಳಿಕೆಯನ್ನೆಲ್ಲಾ ಹಸುಗಳಿಗೆ ಮೇವಾಗಿ ಬಳಸುತ್ತಾರೆ. ಕೃಷಿ, ಹೈನುಗಾರಿಕೆಯಲ್ಲಿ ಮತ್ತು ಪರಿಶ್ರಮದಲ್ಲಿ ನಮ್ಮ ಭಾಗದ ರೈತರು ಎತ್ತಿದ ಕೈ” ಎನ್ನುತ್ತಾರೆ ಸಂಘದ ನಿರ್ದೇಶಕ ರಾಜಶೇಖರ್.
“ಸಂಘದ ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ. ಇದು ಕೂಡ ಸಂಘದ ಬೆಳವಣಿಗೆಗೆ ಪೂರಕವಾಗಿದೆ. ಸಂಘವನ್ನು ಸ್ಥಾಪಿಸಿದಾಗಿನಿಂದಲೂ ಎಲ್ಲರೂ ಇದರ ಬೆಳವಣಿಗೆಗೆ ಸಹಕರಿಸಿದ್ದಾರೆ” ಎಂದು ಅವರು ಹೇಳಿದರು.
Malamachanahalli MPCS ಆಡಳಿತ ಮಂಡಳಿ:
ಎಂ.ಎನ್.ರಾಮಚಂದ್ರಾಚಾರಿ (ಅಧ್ಯಕ್ಷ), ಸವಿತಾ (ಉಪಾಧ್ಯಕ್ಷೆ), ನಿರ್ದೇಶಕರು : ಎಂ.ಜೆ.ರಾಜಶೇಖರ್, ಆರ್.ಸತೀಶ್, ಡಿ.ದ್ಯಾವಪ್ಪ, ಅಶೋಕ್, ಮನೋಹರ್, ಆರ್.ವೆಂಕಟೇಶ್, ಶ್ರೀನಿವಾಸಪ್ಪ, ವೆಂಕಟೇಗೌಡ, ಎಂ.ಎಸ್.ಕೃಷ್ಣಪ್ಪ, ಪ್ರಮೀಳಮ್ಮ, ಮುನಿಲಕ್ಷ್ಮಮ್ಮ, ಕಾರ್ಯದರ್ಶಿ ವಿನಯ್ ಕುಮಾರ್.