Malamachanahalli, Sidlaghatta : ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್ಲಾ ಸೌಲಭ್ಯಗಳು ದೊರೆಯಬೇಕು ಅವರು ಬೆಳೆದು ದೊಡ್ಡವರಾಗಿ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಮಳಮಾಚನಹಳ್ಳಿ ಗ್ರಾಮದ ಯುವ ಮುಖಂಡ ರವಿ ಬಿ ಗೌಡರವರು ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಕಲ್ಪಿಸಲಾಗುತ್ತಿದ್ದು, ಮಳಮಾಚನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳು ನಮ್ಮ ಸರ್ಕಾರಿ ಶಾಲೆಯಲ್ಲಿ ದಾಖಲಾಗಿ ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ದ್ವಾರದಲ್ಲಿ ಚಪ್ಪರ, ತಳಿರು ತೋರಣಗಳಿಂದ ಶೃಂಗರಿಸಿ, ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ, ಸಮವಸ್ತ್ರ, ಪಠ್ಯಪುಸ್ತಕಗಳು, ನೋಟ್ ಪುಸ್ತಕ, ಲೇಖನ ಸಾಮಗ್ರಿಗಳು ಹಾಗು ಚಾಕೊಲೇಟ್ ನೀಡುವ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಶೈಲ ರವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣವೆಂಬುದು ಬಹಳ ಮಹತ್ವದ ಪಾತ್ರ ವಹಿಸುತ್ತದೆ ಅದರಂತೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಲ್ಲಿ ಬಡವ ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಬೆಳೆಯುತ್ತಾರೆ. ಇಲ್ಲಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಾಗಿ ಬೆಳೆಯುತ್ತವೆ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಹಾಗೂ ಉದ್ಯೋಗಗಳನ್ನು ಪಡೆಯಲು ಸರ್ಕಾರಿ ಶಾಲೆಯಲ್ಲಿ ಮಾಡಿದ ವಿದ್ಯಾಭ್ಯಾಸ ಬಹಳಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದ ಅವರು ತನ್ನ ವಿದ್ಯಾಭ್ಯಾಸದ ಜೀವನವನ್ನು ಎಲ್ಲಾ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಮುಗಿಸಿರುವುದಾಗಿ ತಿಳಿಸಿದರು.
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಂಜುನಾಥ್ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ಎಂಟನೇ ತರಗತಿ ಮಕ್ಕಳಿಗೆ ಗಣಿತ ಹಾಗೂ ವಿಜ್ಞಾನ ಪಾಠ ಮಾಡಲು ಶಿಕ್ಷಕರ ಕೊರತೆಯಿದ್ದು ಆದಷ್ಟು ಬೇಗ ಶಿಕ್ಷಕರನ್ನು ನೇಮಿಸಬೇಕು ಹಾಗು ಶಾಲೆಗೆ ಆಟದ ಮೈದಾನವಿಲ್ಲದೆ ಮಕ್ಕಳಿಗೆ ಕ್ರೀಡಾ ಚಟುವಟಿಕೆಯಲ್ಲಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು ಆದಷ್ಟು ಬೇಗ ಮೈದಾನವನ್ನು ಕಲ್ಪಿಸಿಕೊಡಬೇಕೆಂದು ಹಾಗೂ ಶಾಲೆಯ ಮುಂಭಾಗದಲ್ಲಿ ರಸ್ತೆ ಇದ್ದು ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುತ್ತವೆ , ಇಲ್ಲಿ ಶಾಲೆ ಇರುವದರ ಸೂಚನಾ ಫಲಕವಾಗಲಿ ಹಾಗೂ ಯಾವುದೇ ರೀತಿಯ ರಸ್ತೆಹುಬ್ಬುಗಳು ಇಲ್ಲದೇ ಇರುವುದರಿಂದ ಮಕ್ಕಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು ಶಾಲೆಯ ಎರಡು ಕಡೆಗಳಲ್ಲಿ ರಸ್ತೆ ಹುಬ್ಬುಗಳನ್ನು ನಿರ್ಮಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಮುನೇಗೌಡ, ಕಾರ್ಯದರ್ಶಿ ರಾಜಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ರಾಮಚಂದ್ರಚಾರಿ, ಗ್ರಾಮಸ್ಥರಾದ ಮುನಿಶ್ಯಾಮಿಗೌಡ, ಸುಮಂತ್,ಮನೋಹರ್ ಶಾಲಾ ಶಿಕ್ಷರಾದ ರವಿ ಎನ್,ಮಧುಸೂಧನ್,ಮಂಜುಳಾ, ಸುಧಾ, ವೀಣಾ ಉಪಸ್ಥಿತರಿದ್ದರು.