Sidlaghatta : ಹಿಂದುಳಿದ ಮತ್ತು ಶ್ರಮಜೀವಿ ವರ್ಗಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ನಡೆಸಿದವರಲ್ಲಿ ಮಾಚಿದೇವರು ಪ್ರಮುಖರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಭಕ್ತಿಪ್ರಧಾನ ಚಿಂತನೆಗಳನ್ನು ಜನರಲ್ಲಿ ಬೆಳೆಸಿದ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಮಡಿವಾಳ ಸಮುದಾಯದ ವತಿಯಿಂದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಆಚರಿಸಲಾಯಿತು.
ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿ ನಡೆಸಿದರು. ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದು, ವಚನ ಸಾಹಿತ್ಯದ ರಕ್ಷಣೆಗೆ ಹೋರಾಡಿದ ಮಹಾನ್ ಶರಣರ ಜಯಂತಿಯನ್ನು ಶ್ರದ್ಧೆಯಿಂದ ಆಚರಿಸುವುದು ಅರ್ಥಪೂರ್ಣವಾಗಿದೆ. ಮಡಿವಾಳ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಸಮುದಾಯ ಮುಖಂಡ ರಾಜಣ್ಣ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.