Sidlaghatta : ಶಿಡ್ಲಘಟ್ಟ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಾರ ಲೋಕಸಭೆ ಚುನಾವಣೆಯ ಮತದಾನವು ಯಾವುದೇ ಗೊಂದಲವಿಲ್ಲದೆ ಶಾಂತಿಯಿಂದ ಸುಸೂತ್ರವಾಗಿ ನಡೆಯಿತು. ಶಿಡ್ಲಘಟ್ಟ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 81.04 ರಷ್ಟು ಮತದಾನವಾಗಿದೆ. ಕಳೆದ ಸಂಸತ್ ಚುನಾವಣೆಗಿಂತಲೂ ಹೆಚ್ಚು ಪ್ರಮಾಣದ ಮತದಾನವಾಗಿದೆ.
ಶಿಡ್ಲಘಟ್ಟ ನಗರದ ಉಲ್ಲೂರುಪೇಟೆ, ಬಶೆಟ್ಟಹಳ್ಳಿ, ಜಂಗಮಕೋಟೆ ಹಾಗೂ ಚಿಲಕಲನೇರ್ಪು ವ್ಯಾಪ್ತಿಯಲ್ಲಿ ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಕೆಲವೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತಾದರೂ ತಕ್ಷಣವೇ ಸರಿಪಡಿಸಿ ಮತದಾನ ಮುಂದುವರೆದಿದೆ.
ಬಿಸಿಲಿನ ವಾತಾವರಣದಿಂದಾಗಿ ಬೆಳ್ಳಂಬೆಳಗ್ಗೆ ಮತಗಟ್ಟೆ ಕೇಂದ್ರಗಳ ಬಳಿ ಮತದಾರರು ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು. ನಂತರ ಮದ್ಯಾಹ್ನದ ವೇಳೆಗೆ ಬಿಸಿಲಿನ ಧಗೆಯಿಂದಾಗಿ ಮತದಾರರು ಮತಗಟ್ಟೆ ಬಳಿ ಸುಳಿಯಲಿಲ್ಲ. ಆದರೆ ಸಂಜೆ ವೇಳೆಗೆ ಮತ್ತೆ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 6 ಗಂಟೆಗೆ ಮುಗಿಯಿತಾದರೂ ಬಿಸಿಲಿನ ಕಾರಣ ಸಾಕಷ್ಟು ಮತದಾರರು ಸಂಜೆ ಬಿಸಿಲಿನ ಧಗೆ ಕಡಿಮೆಯಾದ ನಂತರ ಮತಗಟ್ಟೆಯತ್ತ ಬಂದರು. ಹಾಗಾಗಿ ಸುಮಾರು 10ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಯೊಳಗೆ ಮತದಾನ ಕೇಂದ್ರದ ಒಳಗೆ ಬಂದ ಕಾರಣ 7 ಗಂಟೆಯಾದರೂ ಮತದಾನ ಪ್ರಕ್ರಿಯೆ ನಡೆಯುತ್ತಿತ್ತು.
ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ ಅವರು ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ಮತದಾರರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.