Sidlaghatta : ಏಪ್ರಿಲ್ 26 ರ ಶುಕ್ರವಾರ ನಡೆಯುವ ವಿಧಾನಸಭಾ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿರುವುದಾಗಿ ತಾಲ್ಲೂಕು ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಂ ತಿಳಿಸಿದರು.
ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ಗುರುವಾರ ಚುನಾವಣಾ ಮತಟ್ಟೆಗಳಿಗೆ ಚುನಾವಣಾ ಯಂತ್ರ ಸೇರಿದಂತೆ ಸಲಕರಣೆಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 244 ಮತಗಟ್ಟೆ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, 2000 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಿಗೆ ಇ.ವಿ.ಎಂ, ಸಲಕರಣೆಗಳ ಜೊತೆ ಚುನಾವಣಾ ಸಿಬ್ಬಂದಿಯನ್ನು ಚುನಾವಣಾ ಮತಗಟ್ಟೆಗಳಿಗೆ ಬಿಡುವುದು ಹಾಗೂ ಚುನಾವಣೆ ನಂತರ ಕರೆತರುವುದಕ್ಕೆ ಬಸ್ಸುಗಳು ಸೇರಿದಂತೆ ವಿವಿಧ ಜೀಪ್‌ಗಳನ್ನು ಆಯೋಜನೆ ಮಾಡಲಾಗಿದ್ದು, ಚುನಾವಣಾ ಸಮಯದಲ್ಲಿ ಅಧಿಕಾರಿಗಳು ಬೂತ್‌ಗಳಿಗೆ ಓಡಾಡಲು ಜೀಪುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
2024 ರ ಲೋಕಸಭಾ ಚುನಾವಣೆಯು ಶುಕ್ರವಾರ ನಡೆಯಲಿದ್ದು, ಮತದಾನಕ್ಕೆ ಅಧಿಕಾರಿಗಳು ಸರ್ವಸನ್ನದ್ಧರಾಗಿದ್ದಾರೆ. ಪುರುಷರು : 1,02,327, ಮಹಿಳೆಯರು : 1,03,453 ಮತ್ತು ಇತರೆ 9 ಸೇರಿದಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 2,05,789. ವಿಕಲಚೇತನರು ಮತ್ತು 85 ವರ್ಷ ಮೇಲ್ಪಟ್ಟ ವೃದ್ಧರು ಒಟ್ಟಾರೆ 486 ಮಂದಿಯಿದ್ದು, ಅವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅನುಕೂಲ ಕಲ್ಪಿಸಲಾಗಿದೆ. ಅವರಲ್ಲಿ 466 ಮಂದಿ ಈಗಾಗಲೇ ಮತ ಚಲಾಯಿಸಿದ್ದಾರೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 54 ಸೂಕ್ಷ್ಮ ಮತಗಟ್ಟೆಗಳಿವೆ. ಗಂಗನಹಳ್ಳಿ, ಆನೆಮಡುಗು, ಕೋಟೆ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂದನವನ ಮತ್ತು ಸೊಣಗಾನಹಳ್ಳಿಗಳು ದುರ್ಬಲ ಮತಗಟ್ಟೆಗಳಾಗಿವೆ. ಮತಗಟ್ಟೆ ಕೇಂದ್ರಗಳ ಬಳಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಏಳು ಮಂದಿ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. ಮತಗಟ್ಟೆ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ಮಾತನಾಡಿ, ಮತದಾನ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಮತದಾನ ಮಾಡಲು ಮತದಾರರು ತಮ್ಮ ಬಳಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಸೇರಿದಂತೆ 10 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದರು.