
Sidlaghatta : ಶಿಡ್ಲಘಟ್ಟದಲ್ಲಿ ಮಾರ್ಚ್ 8 ರಂದು ನಡೆಯಲಿರುವ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ 132 ಮತ್ತು ಪ್ರಧಾನ ಸಿವಿಲ್ ನ್ಯಾಯಾಲಯದ 118 ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಗುರುತಿಸಲಾಗಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ತಿಳಿಸಿದ್ದಾರೆ.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಕಿಯಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಕೀಲರು ಮತ್ತು ಕಕ್ಷಿದಾರರ ಪರಸ್ಪರ ಸಹಕಾರದೊಂದಿಗೆ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುತ್ತಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾನೂನು ಸೇವಾ ಸಮಿತಿ ನಿರಂತರವಾಗಿ ರಾಜಿ ಪಂಚಾಯಿತಿಯ ಮೂಲಕ ನ್ಯಾಯಾಲಯದಲ್ಲಿ ಬಾಕಿಯಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಪರಿಹರಿಸುತ್ತಿದ್ದು, ಲೋಕ ಅದಾಲತ್ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಪ್ರಕರಣಗಳನ್ನು ನಿರ್ಧಾರಗೊಳಿಸಲು ಪ್ರಯತ್ನಿಸುತ್ತಿದೆ.
ಚೆಕ್ಕು ಅಮಾನ್ಯ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಸಿವಿಲ್ ಮತ್ತು ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಎರಡೂ ಕಡೆಯವರ ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥ ಪಡಿಸಲಾಗುವುದು. ಇದರಿಂದ ಕಾನೂನು ಸಲಹೆ, ಮಾರ್ಗದರ್ಶನ, ಶೀಘ್ರ ನಿರ್ಧಾರ ಮತ್ತು ತೊಂದರೆ ರಹಿತವಾಗಿ ನ್ಯಾಯ ದೊರಕಲು ಅವಕಾಶ ಸಿಗಲಿದೆ.
ಲೋಕ ಅದಾಲತ್‌ನಲ್ಲಿ ಸ್ವಯಂಪ್ರೇರಿತರಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಪರಸ್ಪರ ಬಾಂಧವ್ಯ ಉಳಿಯುವುದರೊಂದಿಗೆ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯ ದೊರಕಲು ಇದು ಪ್ರಮುಖ ಅವಕಾಶವಾಗಿದೆ.
ಮಾರ್ಚ್ 8 ರಂದು ನಡೆಯಲಿರುವ ಲೋಕ ಅದಾಲತ್‌ನಲ್ಲಿ ಭಾಗವಹಿಸಲು ಬಯಸುವ ಸಾರ್ವಜನಿಕರು ಮುಂಚಿತವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ. ಪೂಜಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಭಾಸ್ಕರ್ ಹಾಗೂ ಇತರರು ಹಾಜರಿದ್ದರು.