ಜ.10 ರಿಂದ ಆರಂಭವಾಗಲಿರುವ ಹತ್ತು ದಿನಗಳ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಆಂಗವಾಗಿ ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆರೋಗ್ಯ ಸಿಬ್ಬಂದಿ ಹಾಗು ಆಶಾ ಕಾರ್ಯಕರ್ತರಿಗಾಗಿ ಅಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ರಾಜ್ಯಾದ್ಯಂತ ಕೊರೋನಾ ಮೂರನೇ ಅಲೆ ಪ್ರಾರಂಭವಾಗಿದ್ದು ತಾಲೂಕಿನಲ್ಲಿಯೂ ಸಕ್ರಿಯ ಕೊರೋನಾ ಪ್ರಕರಣಗಳು ಕಂಡುಬಂದಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕು ಸ್ಯಾನಿಟೈಜರ್ ಬಳಸುವ ಜೊತೆಗೆ ಸಾಮಾಜಿಕ ಆಂತರಿಕ ಕಾಪಾಡಿಕೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಯಾವುದೇ ಓಮಿಕ್ರಾನ್ ಪ್ರಕರಣಗಳು ಈವರೆಗೂ ದಾಖಲಾಗಿಲ್ಲ. ಸಾರ್ವಜನಿಕರು ಯಾವುದೇ ಭಯಪಡುವ ಅವಶ್ಯಕತೆಯಿಲ್ಲ ಬದಲಿಗೆ ಎಚ್ಚರಿಕೆ ವಹಿಸುವ ಮೂಲಕ ರೋಗ ಹರಡುವುದನ್ನು ತಪ್ಪಿಸಬೇಕು ಎಂದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಮುಂಬರುವ 2025 ರೊಳಗೆ ಕ್ಷಯಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಲೋಕೇಶ್, ದೇವರಾಜ್, ಧನಂಜಯ್, ನಂದಿನಿ, ಚೈತ್ರ, ಗೀತಾ, ವಿಜಯಮ್ಮ, ಕ್ಷಯ ರೋಗದ ಮೇಲ್ವಿಚಾರಕ ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.