Sidlaghatta : ಕೃಷ್ಣ ಜನ್ಮಾಷ್ಠಮಿ (Krishna Janmashtami) ಪ್ರಯುಕ್ತ ಶ್ರೀಕೃಷ್ಣನ ಪೂಜೆಯನ್ನು ಎಲ್ಲೆಡೆ ಆಚರಿಸುತ್ತಾರೆ. ನಗರದ ಗೌಡರಬೀದಿಯ ಪಾರ್ಥಸಾರಥಿ ಮಂಜುನಾಥ್ ಅವರ ಮನೆಯಲ್ಲಿ ಹಲವಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತಾರೆ.

ಕೃಷ್ಣನು ಗೋಕುಲದಲ್ಲಿ ಗೋಪಿಕಾ ಸ್ತ್ರೀಯರನ್ನು ಗೋಳು ಹೊಯ್ದುಕೊಳ್ಳುತ್ತಾ ಅವರೆಲ್ಲರ ಪ್ರೀತಿಪಾತ್ರನಾಗುವುದು, ಕಾಳಿಂಗಮರ್ಧನ, ಕಂಸವಧೆ, ಕುರುಕ್ಷೇತ್ರ ಯುದ್ಧ ಹೀಗೆ ತಾವೇ ತಯಾರಿಸುವ ಗೊಂಬೆಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ನಿರೂಪಿಸುತ್ತಾರೆ. ಜೊತೆಯಲ್ಲಿ ನೂರೆಂಟು ವಿಧದ ತಿಂಡಿ ತಿನಿಸುಗಳೊಂದಿಗೆ ನಾನಾ ರೀತಿಯ ಹಣ್ಣಗಳು ಮತ್ತು ಹೂಗಳಿಂದ ಶ್ರೀಕೃಷ್ಣನ ವಿಗ್ರಹವನ್ನು ಅಲಂಕರಿಸುತ್ತಾರೆ. ಈ ಬಾರಿ ಅವರು ಶ್ರೀಕೃಷ್ಣ ತುಲಾಭಾರ ಕಥೆಯನ್ನು ಅವರು ನಿರೂಪಿಸಿದ್ದಾರೆ.
“ಶ್ರೀಕೃಷ್ಣನ ಹೆಂಡತಿಯಾದ ಸತ್ಯಭಾಮೆಯು ಶ್ರೀಕೃಷ್ಣನ ತುಲಾಭಾರ ಮಾಡಿದಳು. ಕೃಷ್ಣ ಬಂದು ತಕ್ಕಡಿಯ ಒಂದು ತಟ್ಟೆಯಲ್ಲಿ ಕುಳಿತುಕೊಂಡ. ಸತ್ಯಭಾಮೆ ಇನ್ನೊಂದು ತಟ್ಟೆಯಲ್ಲಿ ತನ್ನ ಒಡವೆಗಳನ್ನು ಹಾಕುತ್ತ ಹೋದಳು. ಆದರೆ ಎಷ್ಟು ಒಡವೆ ಹಾಕಿದರೂ ಕೃಷ್ಣ ನಿರುವ ತಟ್ಟೆ ಮೇಲೆ ಏಳಲೇ ಇಲ್ಲ. ಈ ಸುದ್ದಿಯನ್ನು ತಿಳಿದ ಕೃಷ್ಣನ ಪಟ್ಟ ಮಹಿಷಿಯಾದ ರುಕ್ಮಿಣಿಯು ಅಲ್ಲಿಗೆ ಬಂದು, ಒಂದು ತುಳಸಿ ದಳ ದಲ್ಲಿ ಶ್ರೀಕೃಷ್ಣನ ನಾಮವನ್ನು ಬರೆದು ತಟ್ಟೆಗೆ ತುಳಸಿ ದಳ ಹಾಕಿದಳು. ಆಗ ಕೃಷ್ಣ ನಿರುವ ತಟ್ಟೆ ಮೇಲಕ್ಕೆ ಬಂತು ಮತ್ತು ತುಳಸಿ ದಳದ ತಟ್ಟೆಯ ಜೊತೆ ಸಮನಾಗಿ ತೂಗಾಡಿತು.ಆಗ ಸತ್ಯಭಾಮೆಗೆ ಭಕ್ತಿ ಮುಖ್ಯವೇ ಹೊರತು ಐಶ್ವರ್ಯವಲ್ಲ ಎನ್ನುವುದರ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸಿದಳು. ಈ ಕಥೆಯನ್ನು ನಾವು ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರದರ್ಶಿಸಿದ್ದೇವೆ. ಮನೆಗೆ ಬರುವ ಮಕ್ಕಳು, ಬಂಧುಗಳು ಹಾಗೂ ಸ್ನೇಹಿತರಿಗೆಲ್ಲಾ ಈ ಕಥೆಯನ್ನು ವಿವರಿಸಿ ತಿನಿಸುಗಳನ್ನು ನೀಡುತ್ತೇವೆ” ಎಂದು ಪಾರ್ಥಸಾರಥಿ ಮಂಜುನಾಥ್ ತಿಳಿಸಿದರು.