Sidlaghatta : ಬ್ರಿಟಿಷರ ವಿರುದ್ಧ ಹೋರಾಡಿ ದೇಶಾಭಿಮಾನ ಮೆರೆದ ಚನ್ನಮ್ಮಳ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ ಹಾಗೂ ಶಕ್ತಿಯಾಗಲಿ ಎಂದು ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ತನ್ನ ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಪ್ರಥಮ ವೀರಮಹಿಳೆ. ಸೂರ್ಯ ಮುಳುಗದ ನಾಡಿನವರು ಎಂದೇ ಕರೆಯಲ್ಪಡುತ್ತಿದ್ದ ಬ್ರಿಟಿಷರನ್ನು ಸದೆಬಡಿಯುವ ಮೂಲಕ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಸ್ಮರಿಸಿದರು. ದೇಶಸೇವೆಗಾಗಿ ತನ್ನ ಪ್ರಾಣಾರ್ಪಣೆ ಮಾಡಿದ ಕಾರಣಕ್ಕೆ ಈಗಲೂ ಆಕೆಯನ್ನು ಸ್ಮರಿಸುತ್ತೇವೆ ಎಂದರು.
ಕಸಬಾ ರಜಸ್ವ ನಿರೀಕ್ಷಕ ವೇಣು, ಶಿರಸ್ತೆದಾರ್ ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಗದೀಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಹಾಜರಿದ್ದರು.