ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ, ನಗರದ ತಾಲ್ಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ, ರಾಷ್ಟ್ರಪತಿಗೆ ಶಿರಸ್ತೆದಾರ್ ಮಂಜುನಾಥ್ ಅವರ ಮೂಲಕ ಭಾರತೀಯ ಕಿಸಾನ್ ಸಂಘ ಹಾಗೂ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೂದಾಳ ರಾಮಾಂಜಿ ಮಾತನಾಡಿ, ದೇಶ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದರೂ ಜೀವನಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಆಹಾರವನ್ನು ಉತ್ಪಾಧಿಸುವ ಕೃಷಿ ಕ್ಷೇತ್ರವು ಮಾತ್ರ ದುಸ್ಥಿತಿಯತ್ತ ಸಾಗುತ್ತಿದೆ. 1990ರ ದಶಕದಿಂದ 3.5 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರತಿ ವರ್ಷ ಕೃಷಿ ತ್ಯಜಿಸಿ ನಗರದತ್ತ ಸಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ರೈತರು ತಾವು ಬೆಳೆದ ಬೆಳೆಗಳ ವೆಚ್ಚ ಅಧಿಕವಾಗಿ, ಪ್ರಕೃತಿ ವಿಕೋಪದಿಂದ ನಷ್ಟವುಂಟಾಗಿ ಮತ್ತು ಲಾಭದಾಯಕ ಬೆಲೆ ಸಿಗದ ಕಾರಣ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬೇರೆ ಕ್ಷೇತ್ರಗಳ ಉತ್ಪಾದಕರು ತಾವು ಉತ್ಪಾದಿಸಿದ ಉತ್ಪನ್ನಗಳಿಗೆ ತಾವೇ ದರ ನಿಗದಿಪಡಿಸುತ್ತಾರೆ. ಆದರೆ ರೈತನಿಗೆ ಮಾತ್ರ ಇದು ಸಾಧ್ಯವಾಗುತ್ತಿಲ್ಲ. ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಈ ವ್ಯವಸ್ತೆ ಸರಿಯಾಗಬೇಕಾದರೆ, ರೈತರಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ “ಲಾಭದಾಯಕ ಬೆಲೆ” ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ರೈತರ ಆದಾಯ ದ್ವಿಗುಣಗೊಳ್ಳ ಬೇಕೆಂದು ಕೇಂದ್ರ ಸರ್ಕಾರದ ಒಳ್ಳೆಯ ಚಿಂತನೆಯೇ ಸರಿ. ಆದರೆ, ಸರ್ಕಾರ ಕೇವಲ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದರೆ ಸಾಲದು. ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಸರ್ಕಾರ ಘೋಷಿಸಬೇಕು. ರೈತರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 40 ರೂಪಾಯಿ ದರವನ್ನು ನಿಗಧಿಗೊಳಿಸಬೇಕು. ಪ್ರಕೃತಿ ವಿಕೋಪದಿಂದ ಕೃಷಿ ಜಮೀನುಗಳಿಗೆ ಹೋಗುವಂತಹ ದಾರಿಗಳು ಮಳೆಯಿಂದ ಕೊಚ್ಚಿಹೋಗಿರುತ್ತವೆ. ಸರ್ಕಾರದಿಂದ ಈ ದಾರಿಗಳನ್ನು ಸರಿಪಡಿಸಲು ಹಣವನ್ನು ಮಂಜೂರು ಮಾಡುವುದು. 60 ವರ್ಷ ಮೇಲ್ಪಟ್ಟ ಎಲ್ಲಾ ರೈತರಿಗೂ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ 10 ಲಕ್ಷ ರೂಪಾಯಿ ವರೆಗಿನ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಸರ್ಕಾರ ಮಸೂದೆ ಜಾರಿಗೆ ತರಬೇಕು. ರೈತರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಶುಲ್ಕ ರಹಿತವಾಗಿ ನೀಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು. ಹುಕುಂ ಸಾಗುವಳಿಯಲ್ಲಿ ಮಂಜೂರಾದ ಭೂಮಿಗೆ ಪಹಣಿಯಲ್ಲಿ ಪಿ.ನಂಬರ್ ನೀಡಿದ್ದು ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ. ವಿದ್ಯಾಸಿರಿ ಯೋಜನೆಯಲ್ಲು ಆಗಿರುವ ಲೋಪದೋಷಗಳು ಖಾತೆದಾರರ ಮಕ್ಕಳಿಗೆ ಮಾತ್ರ ಸೌಲಭ್ಯ ಸಿಗುತ್ತಿದ್ದು, ಕೃಷಿ ಕಾರ್ಮಿಕರ ಮಕ್ಕಳು ಈ ಯೋಜನೆಯಡಿ ವಂಚಿತರಾಗುತ್ತಿದ್ದಾರೆ. ಹಣ್ಣು ಮತ್ತು ಹೂ ರಫ್ತಿಗಾಗಿ ವಿದೇಶಿ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಬಿತ್ತನೆ ಬೀಜ, ಗೊಬ್ಬರ, ಕೀಟ ನಿವಾರಕ, ರೋಗ ನಿವಾರಕಗಳ ಚೀಲ/ಪ್ಯಾಕೇಟ್ ಮೇಲೆ ನಿಗಧಿತ ಬೆಲೆ ಹಾಕಬೇಕು. ಜಿಲ್ಲೆಯಲ್ಲಿ 1,30,000 ರೇಷ್ಮೆ ಬೆಳೆಗಾರರಿದ್ದು, 1,96,000 ಹೆಕ್ಟೇರ್ ಹಿಪ್ಪು ನೇರಳೆ ಬೆಳೆ ಇದ್ದು 3000 ಜನ ರೀಲರ್ ಇರುವುದರಿಂದ ಇಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಆಗಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ರೈತರು ಸಾಲವನ್ನು ಮಾಡಿದ್ದು, ಎರಡು ವರ್ಷಗಳಿಂದಕೊರೊನಾ ಅತಿವೃಷ್ಟಿಯಿಂದ ಹಣವನ್ನು ಮರು ಪಾವತಿ ಮಾಡಲು ಸಾಧ್ಯವಾಗದ ಕಾರಣ ಸಾಲವನ್ನು ಮನ್ನಾ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳ ಕುರಿತಾಗಿ ಕಾನೂನನ್ನು ಜಾರಿಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಳೆದ ವರ್ಷ ದೇಶದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಎದುರು ಧರಣಿ ಸತ್ಯಾಗ್ರಹ ನೆಡೆಸಿ ಕೇಂದ್ರ ಸರ್ಕಾರವನ್ನು ಅಗ್ರಹಿಸಲಾಗಿತ್ತು. ಆದರೆ ಇದುವರೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದುದರಿಂದ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಅವರು ಈ ರೀತಿಯ ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ರೈತರ ನೆರವಿಗೆ ಬರಬೇಕಾಗಿ ಕೋರುತ್ತಿದ್ದೇವೆ ಎಂದರು.
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟರೆಡ್ಡಿ, ಶಿವಮೂರ್ತಿ, ಆಂಜನೇಯರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜೆ.ಎಸ್.ವೆಂಕಟಸ್ವಾಮಿ, ನಾಗರಾಜ್, ಶ್ರೀನಿವಾಸ್, ನಾಗಣ್ಣ, ಶ್ರೀಧರ್ ಹಾಜರಿದ್ದರು.