Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಮಾನ ಮನಸ್ಕರ ಹೋರಾಟ ಸಮಿತಿ ನವೆಂಬರ್ 20, ಬುಧವಾರ, 69ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಿದೆ ಎಂದು ಸಮಿತಿಯ ಮುಖಂಡ ವಿಸ್ಡಂ ನಾಗರಾಜ್ ತಿಳಿಸಿದ್ದಾರೆ.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಕೋಟೆ ವೃತ್ತದ ಡಾ. ಪುನೀತ್ ರಾಜ್‌ಕುಮಾರ್ ವೇದಿಕೆ ಯಲ್ಲಿ ಕನ್ನಡಪರ ಮತ್ತು ರೈತಪರ ಸಂಘಟನೆಗಳು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ನಡೆಸಲಿವೆ.
ಸಂಜೆ ವೇಳೆ ಬಿಗ್ ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್, ಜೂ. ಡಾ. ರಾಜ್‌ಕುಮಾರ್, ಜೂ. ರವಿಚಂದ್ರನ್, ಮತ್ತು ನಟಿ ಅಮೂಲ್ಯಾಗೌಡ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡದ ರಥವು ಬುಧವಾರ ಲಕ್ಕಹಳ್ಳಿ ಗೇಟ್ ಬಳಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಲಿದೆ. ಶಾಸಕರು ಮತ್ತು ತಾಲ್ಲೂಕು ಆಡಳಿತದ ವತಿಯಿಂದ ರಥವನ್ನು ಬರಮಾಡಿಕೊಂಡು, ಕೋಟೆ ವೃತ್ತದಲ್ಲಿ ಮಾಲಾರ್ಪಣೆ ಮಾಡಲಾಗುವುದು. ನಂತರ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿ, ದಿಬ್ಬೂರಹಳ್ಳಿ ರಸ್ತೆಯಲ್ಲಿ ರಥವನ್ನು ಬೀಳ್ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸಮಿತಿಯ ಸದಸ್ಯ ರವಿಪ್ರಕಾಶ್ ಹೇಳಿದರು, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಕನ್ನಡದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು.
ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಬಿ.ಕೆ. ಮುನಿಕೆಂಪಣ್ಣ, ಪ್ರತೀಶ್, ಈಧರೆ ಪ್ರಕಾಶ್, ಗೋವಿಂದರಾಜು, ಶ್ರೀರಾಮ್, ದೀಪು, ಸೋಮ, ಮಧುಲತಾ ಮತ್ತಿತರರು ಉಪಸ್ಥಿತರಿದ್ದರು.